ದಾವಣಗೆರೆ: ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಶೇ. 5ರಿಂದ 10ರಷ್ಟು ಹೆಚ್ಚಾಗಲಿದೆ. ವಿದ್ಯುತ್ ಕೊರೆ ನಿಭಾಯಿಸಲು ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ವಿನಿಮಯ ಅಡಿಯಲ್ಲಿ ಖರೀದಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಜನವರಿಯಲ್ಲಿ ಶೇ 5ರಷ್ಟು ಬೇಡಿಕೆ ಹೆಚ್ಚಾಗಿತ್ತು. ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಈ ಬೇಡಿಕೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಉತ್ತರಪ್ರದೇಶ ಹಾಗೂ ಪಂಜಾಬ್ ರಾಜ್ಯದಿಂದ ಪಡೆದ ವಿದ್ಯುತ್ ಅನ್ನು ಜೂನ್ ಬಳಿಕ ಮರಳಿ ನೀಡಲಾಗುತ್ತದೆ. ಈ ಕುರಿತು ಹಲವು ಸುತ್ತಿನ ಚರ್ಚೆಗಳು ನಡೆದಿವೆ ಎಂದು ಸಚಿವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯುತ್ ದರ ಏರಿಕೆ ಗೆ ಸಂಬಂಧಿಸಿದಂತೆ ಎಲ್ಲ ‘ಎಸ್ಕಾಂ’ಗಳು ಪ್ರತಿ ವರ್ಷ ಪ್ರಸ್ತಾವ ಸಲ್ಲಿಕೆ ಮಾಡುತ್ತವೆ. ಕೆಇಆರ್‌ಸಿ ಸಾರ್ವಜನಿಕ ಅಹವಾಲು ಆಲಿಸಿ ನಿರ್ಧಾರ ಕೈಗೊಳ್ಳುತ್ತದೆ. ಕಳೆದ ವರ್ಷ ವಿದ್ಯುತ್ ದರ ಏರಿಕೆ ಮಾಡಿಲ್ಲ. ಕೆಇಆರ್‌ಸಿ ಸೂಚನೆ ಮೇರೆಗೆ ಸರ್ಕಾರದ ನಿರ್ಧಾರ ಹೊರಬೀಳಲಿದೆ ಎಂದು ವಿದ್ಯುತ್ ಬೆಲೆ ಏರಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಳೆದ ವರ್ಷ ಬರ ಪರಿಸ್ಥಿತಿ ತಲೆದೋರಿದಾಗಲೂ ಕೃಷಿ ಪಂಪ್‌ಸೆಟ್‌ಗಳಿಗೆ ಒಂದು ಗಂಟೆ ಮಾತ್ರ ವಿದ್ಯುತ್ ಕಡಿತ ಮಾಡಲಾಗಿತ್ತು. ಪ್ರಸಕ್ತ ವರ್ಷ ರಾಜ್ಯದ ಯಾವ ಭಾಗದಲ್ಲಿಯೂ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಕೃಷಿ ಪಂಪ್ ಸೆಟ್‌ಗಳಿಗೆ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಎಸ್ಕಾಂ ಗಳಿಗೆ ಸರ್ಕಾರದ ಹಲವು ಇಲಾಖೆಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಈ ಮೊತ್ತ ದೊಡ್ಡ ಪ್ರಮಾಣದಲ್ಲಿದೆ. ಎಲ್ಲ ಇಲಾಖೆಗಳಿಂದ ಬಾಕಿ ಪಾವತಿಯಾದರೆ ನಷ್ಟದ ಪ್ರಮಾಣ ಕಡಿಮೆ ಆಗಲಿದೆ ಎಂದು ಸಚಿವರು ತಿಳಿಸಿದರು.