ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ನೆರವು ಕೋರಿ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಉದ್ಭವಿಸಬಹುದಾದ ಪರಿಸ್ಥಿತಿ ಕುರಿತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವ ಕೆ.ಜೆ.ಜಾರ್ಜ್, ಬೇಸಿಗೆಯನ್ನು ನಿಭಾಯಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಮತ್ತು ಅದಕ್ಕೆ ಬೇಕಾದ ಅನುದಾನದ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ಪ್ರಸ್ತಾವನೆಯೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಹೆಚ್ಚುವರಿ ಅನುದಾನ ಕೋರಿ ಮನವಿ ಸಲ್ಲಿಸಲಾಗುವುದು. ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಳೆದ ವರ್ಷದ ಬೇಸಿಗೆಯಲ್ಲಿ ಕೈಗೊಂಡ ಕಾಮಗಾರಿಗಳಿಗೆ 3.60ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕಿದೆ. ಅದೇ ರೀತಿ ಈ ಬಾರಿಯ ನಿರ್ವಹಣೆಗೆ ಅನುದಾನ ಬೇಕಾಗಿದೆ. ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಜಾರ್ಜ್ ತಿಳಿಸಿದರು.
ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಜಿಲ್ಲೆಯಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ರೀತಿ ಈ ವರ್ಷವೂ ಬೇಸಿಗೆಯಲ್ಲಿ ಜನರಿಗೆ ಹೆಚ್ಚು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ನೀರು, ವಿದ್ಯುತ್ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಬಂದರೂ ಅದನ್ನು ಬಗೆಹರಿಸಲು ಈಗಲೇ ಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಪ್ರಸ್ತುತ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 6.23 ಕೋಟಿ ರೂ. ಲಭ್ಯವಿದೆ. ತುರ್ತು ಸಂದರ್ಭದಲ್ಲಿ ಈ ಹಣ ಬಳಸಿಕೊಂಡು ಸಮಸ್ಯೆಗೆ ಸ್ಪಂದಿಸಬೇಕು. ಕೆರೆಗಳ ಹೂಳೆತ್ತುವ ಕಾರ್ಯವನ್ನು ವೈಜ್ಞಾನಿಕವಾಗಿ ಕೈಗೊಂಡು ಕೆರೆಗಳನ್ನು ಸಂರಕ್ಷಿಸಿಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಜಿಲ್ಲೆಯ ಪರಿಸ್ಥಿತಿ ಕುರಿತು ವಿವರ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, “ಪಸಕ್ತ ಸಾಲಿನಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ತೀವ್ರತರ ಸಮಸ್ಯೆಗಳು ಉದ್ಭವಿಸಿಲ್ಲ. 4 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಕ್ರಮ ವಹಿಸಲಾಗಿದೆ. ಕಳೆದ ಬಾರಿ ಹೆಚ್ಚು ಮಳೆಯಾಗಿದ್ದರಿಂದ ಬಯಲುಸೀಮೆ ಭಾಗಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಿದೆ. ಕೆರೆಗಳನ್ನು ತುಂಬಿಸುವ ಕಾರ್ಯವನ್ನೂ ಕೈಗೊಳ್ಳಲಾಗಿದ್ದು, ತರೀಕೆರೆ ತಾಲೂಕಿನಲ್ಲಿ ಏತ ನೀರಾವರಿ ಯೋಜನೆ ಮೂಲಕ 79 ಕೆರೆಗಳನ್ನು ತುಂಬಿಸಲಾಗಿದೆ. ಭದ್ರಾ ಜಲಾಶಯ ಭಾಗದಲ್ಲಿ 73 ಕೆರೆಗಳನ್ನು ಭರ್ತಿ ಮಾಡಲಾಗಿದೆ. ಆರೋಗ್ಯ ಸಮಸ್ಯೆ ಉದ್ಭವವಾಗದಂತೆ ಮತ್ತು ಅರಣ್ಯದಲ್ಲಿ ಬೆಂಕಿ ದುರಂತ ಸಂಭವಿಸುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಟಾಸ್ಕ್ ಫೋರ್ಸ್ ಮೂಲಕ ಕಳೆದ ವರ್ಷ ಕೈಗೊಂಡ ಪರಿಹಾರ ಕಾರ್ಯಕ್ರಮಗಳಿಗೆ 3.6 ಕೋಟಿ ರೂ. ಬಿಡುಗಡೆಯಾಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದಾಗ, ಜಿಲ್ಲೆಯ ಶಾಸಕರ ಜತೆಗೆ ಈ ಬಗ್ಗೆ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಹೀಗಾಗಿ ಜಿಲ್ಲೆಗೆ ಅಗತ್ಯ ವಿದ್ಯುತ್ ನೀಡಲು ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆ ಇರುವುದರಿಂದ ಮತ್ತು ಅಕ್ರಮ ಪಂಪ್ ಸೆಟ್ ಗಳನ್ನು ಬಳಸುತ್ತಿರುವುದರಿಂದ ಒತ್ತಡ ತಡೆದುಕೊಳ್ಳಲು ಸಾಧ್ಯವಾಗದೆ ಟ್ರಾನ್ಸ್ ಫಾರ್ಮರ್ ಗಳು ಹಾನಿಗೊಳಗಾಗುತ್ತವೆ. ಈ ರೀತಿಯ ತಾಂತ್ರಿಕ ಸಮಸ್ಯೆ ಉದ್ಭವಿಸದಂತೆ ಲಿಂಕ್ ಲೈನ್ ಮೂಲಕ ಅಗತ್ಯ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗುವುದು ಎಂದರು.
ರೈತರಿಗೆ ವಿದ್ಯುತ್ ಸಮಸ್ಯೆ ಉದ್ಭವವಾಗಬಾರದು ಎಂಬ ಕಾರಣಕ್ಕೆ ಕುಸುಮ್-ಬಿ ಯೋಜನೆಯಡಿ ರೈತರಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಒದಗಿಸಲಾಗುತ್ತದೆ. ಕುಸುಮ-ಸಿ ಯೋಜನೆಯಡಿ ಫೀಡರ್ ಸೋಲರೈಸೇಷನ್ ಮೂಲಕ ಆಯಾ ಫೀಡರ್‌ಗಳ ವ್ಯಾಪ್ತಿಯಲ್ಲೇ ವಿದ್ಯುತ್ ಉತ್ಪಾದಿಸಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸಿ ರೈತರು ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಕುಸುಮ್-ಸಿ ಯೋಜನಯಡಿ ಫೀಡರ್ ಸೋಲರೈಸೇನ್ ಗೆ ಅಗತ್ಯ ಭೂಮಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಮತ್ತು ಕ್ರೆಡಲ್ ಅಧ್ಯಕ್ಷ ಟಿ. ಡಿ ರಾಜೇಗೌಡ, ಶಾಸಕರಾದ ಜಿ.ಎಚ್.ಶ್ರೀನಿವಾಸ್,ಎಚ್.ಡಿ. ತಮ್ಮಯ್ಯ, ಕೆ.ಎಸ್.ಆನಂದ್, ನಯನ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ, ಡಾ.ಧನಂಜಯ ಸರ್ಜಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತಿತರರು ಇದ್ದರು.