ಬೆಂಗಳೂರು: ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವುದು ನಮ್ಮ ಮೊದಲ ಆದ್ಯತೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪ್ರತಿನಿಧಿಗಳು ಸಚಿವ ಶರಣಬಸಪ್ಪ ದರ್ಶನಾಪುರ ಅವರ ನೇತೃತ್ವದಲ್ಲಿ ಶಿವಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿ ನಾರಾಯಣಪುರ ಬಸವಸಾಗರ ಜಲಾಶಯದ ಬಲದಂಡೆ ಹಾಗೂ ಎಡದಂಡೆಯಿಂದ ಏ.15ರವರೆಗೆ ಬೆಳೆಗಳಿಗೆ ನೀರು ಹರಿಸಬೇಕೆಂದು ಮನವಿ ಸಲ್ಲಿಸಿದರು.
ಕೃಷ್ಣಾ ನೀರಿನ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಹೌದು, ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದಾರೆ. ಸಚಿವರು, ಶಾಸಕರು, ರೈತಸಂಘದ ಪ್ರತಿನಿಧಿಗಳು ಬೆಳೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ. ಎರಡನೇ ಬೆಳೆ ಹಾಕಬೇಡಿ ಎಂದರೂ ಈ ಭಾಗದ ರೈತರು ಬೆಳೆ ಬೆಳೆಯುತ್ತಿದ್ದಾರೆ. ಈಗ ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯ ಜನ ಕಾಲುವೆಗೆ ನೀರು ಹರಿಸುವಂತೆ ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದವರಿಗೆ ಪತ್ರ ಬರೆಯಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತೇವೆ. ಈ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದಕ್ಕಿಂತ ಅಕ್ಕಪಕ್ಕದ ರಾಜ್ಯಗಳು ಪರಸ್ಪರ ಅನುಸರಿಸಿಕೊಂಡು ಹೋಗುವುದು ಮುಖ್ಯ ಎಂದು ಉತ್ತರಿಸಿದರು. ನಾರಾಯಣಪುರ ಬಸವಸಾಗರ ಜಲಾಶಯದ ಬಲದಂಡೆ ಹಾಗೂ ಎಡದಂಡೆ ವ್ಯಾಪ್ತಿಯ 89 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಏ.15ರವರೆಗೆ ನೀರು ಹರಿಸಬೇಕು. ಜಲಾಶಯದಲ್ಲಿ ಕೃಷಿಗಾಗಿ 6.60 ಟಿಎಂಸಿ ಅಡಿ ನೀರನ್ನು ಕಾಯ್ದಿರಿಸಲಾಗಿದ್ದು ಅದನ್ನು ಹರಿಸಿದರೆ ಮಾತ್ರ ರೈತರಿಗೆ ಅವರು ಬೆಳೆದಿರುವ ಬೆಳೆ ಕೈ ಸೇರುತ್ತದೆ ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.