ಮಂಡ್ಯ: “ಕೋವಿಡ್ 19 ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಕೇಂದ್ರ ಬಿಜೆಪಿ ಸರಕಾರ ಸಂಸದರ ನಿಧಿ ನೀಡಿರಲಿಲ್ಲ” ಎಂದು ಮಂಡ್ಯದಲ್ಲಿ ಇಂದು ಸುಮಲತಾ ಅಂಬರೀಶ ಅವರು ನೀಡಿದ ಹೇಳಿಕೆ ಹಲವು ಆಯಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ ಮಾತನಾಡುವಾಗ ತಮ್ಮ ಆಡಳಿತದ ಅವಧಿಯಲ್ಲಿ ಕೋವಿಡ್ 19 ಎದುರಿಸಿರುವುದರ ಬಗ್ಗೆ ಪ್ರಸ್ತಾಪ ಮಾಡುತ್ತಾ, ಆ ವೇಳೆ ಕೇಂದ್ರ ಸರಕಾರದಿಂದ ಬರಬೇಕಿದ್ದ ಸಂಸದರ ನಿಧಿಗೆ ಖೋತಾ ಆಗಿತ್ತು ಎನ್ನುವುದನ್ನು ಬಿಜೆಪಿ ಟಿಕೆಟ್ ಕಳೆದುಕೊಂಡ ಈ ಸಂದರ್ಭದಲ್ಲಿ ಬಹಿರಂಗಪಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಕೋಕ್ ಕೊಟ್ಟು ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಡಲಾಗಿತ್ತು. ಇದಾದ ನಂತರ ತಮ್ಮ ನಡೆಯನ್ನು ನಿಗೂಢವಾಗಿ ಇಟ್ಟಿದ್ದ ಸುಮಲತಾ ಏ.12 ರ ನಂತರ ಸ್ಪರ್ಧೆ ಕುರಿತು ಅಭಿಪ್ರಾಯ ಬಹಿರಂಗಪಡಿಸುವುದಾಗಿ ಹೇಳಿದ್ದರು.
ಇತ್ತೀಚಿನ ಬೆಳವಣಿಗೆಯಲ್ಲಿ ಮಂಡ್ಯ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ. ಮಂಡ್ಯದಿಂದ ಪಕ್ಷೇತರವಾಗಿ ಸ್ಪರ್ಧೆಯನ್ನೂ ಮಾಡುವುದಿಲ್ಲ ಎಂದು ಸುಮಲತಾ ಘೋಷಿಸಿದ್ದರು. ಇಂದಿನ ಅಚ್ಚರಿಯ ಬೆಳವಣಿಗೆಯಲ್ಲಿ ಮಂಡ್ಯದಲ್ಲಿ ಮಾತನಾಡುತ್ತಾ ಕೇಂದ್ರ ಕೋವಿಡ್ 19 ಎದುರಿಸಿದ ತಮ್ಮ ಅವಧಿಯಲ್ಲಿ 2 ವರ್ಷಗಳ ಕಾಲ ಸಂಸದರ ನಿಧಿ ಬಂದಿಲ್ಲ ಎನ್ನುವುದನ್ನು ಬಹಿರಂಗವಾಗಿ ಹೇಳಿದ್ದಾರೆ.