ನಗರದ ಕೋರಮಂಗಲ ವ್ಯಾಪ್ತಿಯಲ್ಲಿ ನಿರ್ಮಿಸಿರುವ “ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ”ದಿಂದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕಾರ್ಯವು ಯಶಸ್ವಿಯಾಗಿ ನಡೆಯುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದ್ದು, ನಗರದ ಸೌಂದರ್ಯವನ್ನು ಹೆಚ್ಚಿಸಿ, ಬೆಂಗಳೂರನ್ನು ಸ್ವಚ್ಛ-ಸುಂದರ ನಗರವನ್ನಾಗಿಸಲು ಪಾಲಿಕೆ ಹಾಗೂ ಬಿ.ಎಸ್.ಡಬ್ಲ್ಯೂ.ಎಂ.ಎಲ್ (BSWML) ವತಿಯಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ.
ನಗರದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ನಗರದ ಬಿಟಿಎಂ ಬಡಾವಣೆ ವಿಧಾನಸಭಾ ಕ್ಷೇತ್ರದ ಈಜೀಪುರ ವಾರ್ಡ್ನಲ್ಲಿ ಮೊದಲ “ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ” ಸ್ಥಾಪಿಸಲಾಗಿದೆ. ಏಪ್ರಿಲ್ 2024 ರಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದ್ದು, ಬಿಟಿಎಂ ಲೇಔಟ್ ವಿಭಾಗದ 3, ಶಾಂತಿನಗರ ವಿಭಾಗದ 3 ವಾರ್ಡ್ಗಳು ಹಾಗೂ ಕೆ-100 ವ್ಯಾಲಿಯಿಂದ ಪ್ರತಿನಿತ್ಯ ಸುಮಾರು 150 ರಿಂದ 160 ಮೆಟ್ರಿಕ್ ಟನ್ ರಷ್ಟು ಘನತ್ಯಾಜ್ಯವನ್ನು ಸ್ವೀಕರಿಸಲಾಗುತ್ತಿದೆ.
7 ‘ಹುಕ್ ಲೋಡರ್’ ವಾಹನಗಳ ಬಳಕೆ:
ಸದರಿ ಘಟಕದಲ್ಲಿ 7 ಹುಕ್ ಲೋಡರ್ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ವಾಹನಕ್ಕೆ ಎರಡು ಕ್ಯಾಪ್ಸೂಲ್ ಮಾದರಿಯ ಕಂಟೈನರ್‌ಗಳಿವೆ. ವಾರ್ಡ್ಗಳಿಂದ ಸಂಗ್ರಹಣೆಯಾಗುವ ತ್ಯಾಜ್ಯವು ಆಟೋ ಟಿಪ್ಪರ್‌ಗಳಿಂದ ನೇರವಾಗಿ ಕ್ಯಾಫ್ಸೂಲ್‌ಗಳಿಗೆ ವರ್ಗಾವಣೆಯಾಗಲಿದ್ದು, ತ್ಯಾಜ್ಯವನ್ನು ಕಂಪ್ರೆಸ್ ಮಾಡಿ ಲಿಚೆಟ್ ದ್ರವತ್ಯಾಜ್ಯವನ್ನು ಪ್ರತ್ಯೇಕಿಸಿ, ಸುಮಾರು 16 ರಿಂದ 18 ಟನ್ ತ್ಯಾಜ್ಯವನ್ನು ಪ್ರತಿಯೊಂದು ಕಂಟೈನರ್‌ನಲ್ಲಿ ವಿಲೇವಾರಿ ಮಾಡಬಹುದಾಗಿರುತ್ತದೆ. ಸದರಿ ತ್ಯಾಜ್ಯದ ಪ್ರಮಾಣವು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾಂಪ್ಯಾಕ್ಟರ್‌ಗಳು ವಿಲೇವಾರಿ ಮಾಡುವ ಪ್ರಮಾಣಕ್ಕಿಂತ 2 ರಿಂದ 2.5ರಷ್ಟು ಅಧಿಕವಾಗಿರುತ್ತದೆ. ಇದರಿಂದ ಕಾಂಪ್ಯಾಕ್ಟರ್ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ.
ಘಟಕಗಳು ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಆಟೋ ಟಿಪ್ಪರ್‌ಗಳ ಮುಖೇನ ಸಂಗ್ರಹವಾಗುವ ತ್ಯಾಜ್ಯವನ್ನು ಕಂಟೈನರ್‌ಗಳಿಗೆ ವಿಲೇವಾರಿ ಮಾಡುವ ಅವಧಿಯು ಹೆಚ್ಚಾಗಿರುವುದರಿಂದ ವಾರ್ಡ್ಗಳಲ್ಲಿ ಸಂಗ್ರಹಣೆಗೆ ಹೆಚ್ಚಿನ ಸಮಯ ದೊರೆಯುತ್ತಿದ್ದು, ತ್ಯಾಜ್ಯದ ಸಮಸ್ಯೆಯು ಕಡಿಮೆಯಾಗಿದೆ. ಹಸಿ ಮತ್ತು ಮಿಶ್ರಿತ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುತ್ತಿದ್ದು, ಹಸಿ ತ್ಯಾಜ್ಯವನ್ನು ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತಿದೆ.
ವಾರ್ಡ್ಗಳಲ್ಲಿ ಸಾರ್ವಜನಿಕರು ತ್ಯಾಜ್ಯವನ್ನು ವಿಂಗಡಣೆ ಮಾಡದೆ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಸುರಿಯುತ್ತಿದ್ದು, ಸದರಿ ತ್ಯಾಜ್ಯವನ್ನು ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕದಲ್ಲಿ ವಿಂಗಡಿಸಿ ಪ್ರತ್ಯೇಕಿತವಾಗಿ ಟ್ರಾನ್ಸ್ಫರ್ ಸ್ಟೇಷನ್‌ಗಳಲ್ಲಿ ಸಂಗ್ರಹಿಸಿ ವಿಲೇವಾಗಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಿಶ್ರಿತ ತ್ಯಾಜ್ಯದ ಪರಿಮಾಣವನ್ನು ಕಡಿಮೆಗೊಳಿಸಲು ಉದ್ದೇಶಿಸಲಾಗಿರುತ್ತದೆ.
12 ಕೋಟಿ ರೂ. ನಿರ್ಮಾಣ ವೆಚ್ಚ:
ಒಂದು ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಸ್ಥಾಪಿಸಲು ಜಿಎಸ್‌ಟಿ ಹೊರತುಪಡಿಸಿ ಸುಮಾರು ರೂ 12 ಕೋಟಿ. ವೆಚ್ಚವಾಗಿದ್ದು, ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ” ಸ್ಥಾಪಿಸಲು ಜಿಎಸ್‌ಟಿ ಹೊರತುಪಡಿಸಿ ರೂ. 5.70 ಕೋಟಿ ವೆಚ್ಚವಾಗಿದ್ದು, ಸದರಿ ದರಗಳು 2019-20 ನೇ ಸಾಲಿನ ದರಗಳಾಗಿರುತ್ತದೆ. ಸದರಿ ಘಟಕಗಳನ್ನು ಮೆ|| ಪರಿಶುದ್ಧ ವೆಂಚರ್ಸ್ ಸಂಸ್ಥೆಯಿಂದ ಸ್ಥಾಪಿಸಿ ಕಾರ್ಯನಿರ್ವಹಿಸಲಾಗುತ್ತ್ತಿದೆ.
ದ್ವಿತೀಯ ಹಂತದ ವರ್ಗಾವಣೆ ಘಟಕದ ಪ್ರಮುಖ ಅಂಶಗಳು:
- ಘಟಕಕ್ಕೆ ತ್ಯಾಜ್ಯವನ್ನು ವಿಲೇವಾರಿ ಮಾಡುವ ಆಟೋ ಟಿಪ್ಪರ್‌ಗಳ ವಿವರಗಳೆಲ್ಲವೂ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಲಿದೆ.
- ಆಟೋ ಟಿಪ್ಪರ್‌ಗಳು ಘಟಕದೊಳಗೆ ಬರುವುದರಿಂದ ಹಿಡಿದು, ಅದರ ಮಾರ್ಗ ಸಂಖ್ಯೆ, ಸಂಖ್ಯಾ ಫಲಕ, ತ್ಯಾಜ್ಯದ ತೂಕ ಎಲ್ಲವೂ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಲಿದೆ.
- ಕ್ಯಾಫ್ಸೂಲ್‌ಗಳ ತಳಭಾಗದಲ್ಲಿ ದ್ರವ-ತ್ಯಾಜ್ಯ ಸಂಗ್ರಹಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಹು ಮುಖ್ಯವಾಗಿ ಲಿಚೆಟ್ ಸೋರಿಕೆಯ ಸಮಸ್ಯೆಯನ್ನು ತಡೆಗಟ್ಟುವ ತಂತ್ರಜ್ಞಾನವನ್ನು ಹೊಂದಿದೆ.
- ಕಂಪ್ರೆಸ್ ಮಾಡಿದ ತ್ಯಾಜ್ಯವನ್ನು ಜಿಪಿಎಸ್ ಅಳವಡಿಸಿರುವ ಹುಕ್ ಲೋಡರ್‌ಗಳ ಮೂಲಕ ಸಂಸ್ಕರಣಾ ಘಟಕಕ್ಕೆ ರವಾನಿಸಲಾಗುತ್ತದೆ.
ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕದ ಪ್ರಮುಖ ಅಂಶಗಳು:
- ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಘಟಕದಲ್ಲಿ ಪ್ರತಿನಿತ್ಯ ಸುಮಾರು 40 ಟನ್ ತ್ಯಾಜ್ಯವು ವಿಂಗಡಿಸುವ ಸಾಮರ್ಥ್ಯವಿದೆ.
- ಘಟಕದಲ್ಲಿ ತ್ಯಾಜ್ಯದ ಅಂಕಿ-ಅಂಶಗಳು ತಿಳಿಯುವುದರಿಂದ ವಾರ್ಡ್ಗಳಲ್ಲಿ ತ್ಯಾಜ್ಯ ವಿಂಗಡಣೆಯ ಪರಿಮಾಣ ತಿಳಿಯಲಿದೆ.
- ತ್ಯಾಜ್ಯವನ್ನು ವಿಂಗಡಿಸಿ ಅದನ್ನು ಮರುಬಳಕೆ ಮಾಡಿಕೊಂಡು ಸಂಪನ್ಮೂಲವನ್ನಾಗಿ ಮಾರ್ಪಡಿಸಬಹುದಾಗಿರುತ್ತದೆ.
- ಘಟಕದಲ್ಲಿ ತ್ಯಾಜ್ಯವನ್ನು ಪ್ರತ್ಯೇಕಿಸುವುದರಿಂದ ಒಣ ತ್ಯಾಜ್ಯವು ಒಂದೇ ಪ್ರದೇಶದಲ್ಲಿ ಶೇಖರಣೆಯಾಗಲಿದ್ದು, ಇದರಿಂದ ಚಿಂದಿ ಆಯುವವರು/ ಅಸಂಘಟಿತ ತ್ಯಾಜ್ಯ ಸಂಗ್ರಾಹಕರಿಗೆ ಸಹಾಯವಾಗುತ್ತದೆ.
20 ಸಾವಿರ ಟರ್ ತ್ಯಾಜ್ಯ ಸ್ವೀಕಾರ:
ಘಟಕಕ್ಕೆ ಏಪ್ರಿಲ್ 2024 ರಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದ್ದು, ಬಿಟಿಎಂ ಲೇಔಟ್ ವಿಭಾಗದ 3, ಶಾಂತಿನಗರ ವಿಭಾಗದ 3 ವಾರ್ಡ್ಗಳು ಹಾಗೂ ಕೆ-100 ವ್ಯಾಲಿಯಿಂದ ಪ್ರತಿನಿತ್ಯ ಸುಮಾರು 150 ರಿಂದ 160 ಮೆಟ್ರಿಕ್ ಟನ್ ರಷ್ಟು ಘನತ್ಯಾಜ್ಯವನ್ನು ಸ್ವೀಕರಿಸಲಾಗುತ್ತಿದೆ. ಏಪ್ರಿಲ್ ನಿಂದ ಇದುವರೆಗೆ 20757.52 ಟನ್ ತ್ಯಾಜ್ಯವನ್ನು ಸ್ವೀಕರಿಸಲಾಗಿದೆ.
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ನಿರ್ಮಿಸುವ ಉದ್ದೇಶವಿದೆ:
ಈಜೀಪುರದಲ್ಲಿ ಸ್ಥಾಪಿಸಲಾಗಿರುವ 1 ಘಟಕ ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿದ್ದು, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಬಿನ್ನಿಪೇಟೆಯಲ್ಲಿ ನಿರ್ಮಿಸಿರುವ ಘಟಕವು ಉದ್ಘಾಟನೆಗೆ ಸಿದ್ದವಾಗಿದೆ. ಸರ್ವಜ್ಞ ನಗರ ವಿಧಾನಭಾ ಕ್ಷೇತ್ರದಲ್ಲಿ ಕಾಮಗಾರಿ ನಡೆಸಲು ಕ್ರಮ ಕೈಗೆತ್ತಿಕೊಳ್ಳಲಾಗುತ್ತಿದೆ. ಈ 3 ಮಾತ್ರವಲ್ಲದೆ 4 ಹೊಸ ಘಟಕಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, 3 ಘಟಕ ಸ್ಥಾಪಿಸಲು ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿದ್ದು, 1 ಘಟಕದ ನಿರ್ಮಾಣಕ್ಕಾಗಿ ಸರ್ಕಾರದ ಅನುಮೋದನೆಗಾಗಿ ಕಳುಹಿಸಲು ಕ್ರಮ ವಹಿಸಲಾಗುತ್ತಿದೆ.
ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು “ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ” ಸ್ಥಾಪಿಸಲು ಯೋಜನೆ ರೂಪಿಸುವ ಉದ್ದೇಶವಿದೆ.