ಬೆಂಗಳೂರು: ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಗೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಕಿವಿ ಮಾತು ಹೇಳಿದ್ದಾರೆ.
ನಗರದ ಮಾಕಳಿಯಲ್ಲಿರುವ ಸೃಷ್ಠಿ ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಾಲೆಯಲ್ಲಿ ಬೋಧಿಸುವ ಶಿಕ್ಷಣಕ್ಕೆ ಸೀಮಿತವಾಗಬಾರದು. ಪಠ್ಯೇತರ ಚಟುವಿಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬೌದ್ಧಿಕ ವಿಕಾಸವಾಗುತ್ತದೆ. ಮಕ್ಕಳು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಮಕ್ಕಳ ಅಭಿರುಚಿ ತಕ್ಕಂತೆ ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದರು. ಶಿಕ್ಷಣವನ್ನು ತಪಸ್ಸಿನಂತೆ ಭಾವಿಸಿ ಶ್ರಮ ವಹಿಸಿ ಅಭ್ಯಾಸ ಮಾಡಿದರೆ ಎತ್ತರದ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತದೆ. ಈ ಶಾಲೆಯ ಎಲ್ಲ ಮಕ್ಕಳು ಗೊಲ್ಡ್ ಮೆಡಲ್ ಪಡೆಯಲಿ ಎಂದು ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಚಿತ್ರನಟ ದಿಗಂತ್ ಮಕ್ಕಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಎರಡು ದಿನ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೊದಲ ದಿನ ಸೃಷ್ಠಿ ಮತ್ತು ಬೆಳಕು ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಸೃಷ್ಠಿ ತರಂಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರೆ ಎರಡನೆಯ ದಿನ ಬಿಎಂಎನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಸೃಷ್ಠಿ ಅನಂತರ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಸಮಾರಂಭದಲ್ಲಿ ಸೃಷ್ಠಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ ನ ಕಾರ್ಯದರ್ಶಿ ಲೋಕೇಶ್ ಎನ್, ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕ ನಿರ್ದೇಶಕಿ ವನಿತಾ ಲೋಕೇಶ್ ಎಸ್ ಕೆ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.