ಬೆಂಗಳೂರು: ರಾಜಭಾಷಾ ಆಯೋಗವನ್ನು ಈ ಕೂಡಲೇ ರದ್ದುಪಡಿಸಿ ರಾಜಭಾಷೆಯ ಹೆಸರಲ್ಲಿ ಹಿಂದಿ ಹೇರಿಕೆಯನ್ನು ನಿಲ್ಲಿಸಿ ದೇಶದ ಎಲ್ಲ ಭಾಷೆಗಳೂ ಸಮಾನ ಎಂದು ಘೋಷಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಆಗ್ರಹಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿಹೇರಿಕೆ ದೇಶಕ್ಕೆ ಮಾರಕ ಮಾತ್ರವಲ್ಲ, ಭಾರತದ ಐಕ್ಯತೆಗೆ ಧಕ್ಕೆ ತರುತ್ತಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಹಿಂದಿ ಭಾಷೆಗೆ ನೀಡಿರುವ ಹೆಚ್ಚುಗಾರಿಕೆಯನ್ನು ಕೂಡಲೇ ರದ್ದುಪಡಿಸಬೇಕು, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ ಎಲ್ಲ ಭಾಷೆಗಳನ್ನು ಒಕ್ಕೂಟ ಸರ್ಕಾರದ ಅಧಿಕೃತ ಆಡಳಿತ/ಸಂವಹನ ಭಾಷೆಗಳನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ನಿನ್ನೆ ಬೆಂಗಳೂರಿನ ಪಂಚತಾರಾ ಹೋಟೆಲ್ ವೊಂದರಲ್ಲಿ ರಾಜಭಾಷಾ ಸಮಿತಿ ನಡೆಸುತ್ತಿದ್ದ ಹಿಂದಿ ಹೇರಿಕೆ ಕುತಂತ್ರಗಳ ಸಮಾಲೋಚನಾ ಕಾರ್ಯಾಗಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಕಾರ್ಯಕರ್ತರು ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಇದು ಹಿಂದಿ ಸಾಮ್ರಾಜ್ಯಶಾಹಿಗಳಿಗೆ ನಾವು ಕೊಟ್ಟ ಬಹುದೊಡ್ಡ ಎಚ್ಚರಿಕೆಯಾಗಿದೆ. ಸ್ವಾತಂತ್ರ್ಯಾನಂತರ ಇದೇ ರಾಜಾಭಾಷಾ ಆಯೋಗ/ಸಮಿತಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ವ್ಯವಸ್ಥಿತ ಕುತಂತ್ರ ನಡೆಸುತ್ತಾ ಬಂದಿದೆ. ಮೊಟ್ಟ ಮೊದಲ ಬಾರಿ ಈ ರಾಜಭಾಷಾ ಸಮಿತಿಗೆ ನೇರವಾಗಿ ಬಿಸಿ ಮುಟ್ಟಿಸುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದೆ ಎಂದರು.
ಆದ್ದರಿಂದ ಕೇಂದ್ರ ಸರ್ಕಾರ ಈ ಕೂಡಲೇ ರಾಜಭಾಷಾ ಸಮಿತಿ/ಆಯೋಗವನ್ನು ರದ್ದುಪಡಿಸಬೇಕು. ರಾಜಭಾಷೆಯ ಹೆಸರಲ್ಲಿ ಹಿಂದಿ ಹೇರುವುದನ್ನು ನಿಲ್ಲಿಸಬೇಕು. ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲಿ ಹಿಂದಿ ಪ್ರಚಾರಕ್ಕೆ ಯಾವುದೇ ಸಂಸ್ಥೆ ಕಾರ್ಯಕ್ರಮ ಮಾಡಲು ಮುಂದಾದರೆ ಅದರ ಪರಿಣಾಮವನ್ನು ಅವರೇ ಎದುರಿಸಬೇಕಾಗುತ್ತದೆ. ನಮ್ಮ ಸಹನೆ ಮಿತಿ ಮೀರಿದೆ. ಇನ್ನು ನಾವು ಉಗ್ರಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವದಲ್ಲಿದೆ. ಜನರ ಆಳ್ವಿಕೆಯ ಕಾಲದಲ್ಲಿ ನಾವು ಇದ್ದೇವೆ. ರಾಜಪ್ರಭುತ್ವ ಹೋಗಿ ದಶಕಗಳೇ ಕಳೆದಿವೆ. ರಾಜರೇ ಇಲ್ಲದ ಕಾಲದಲ್ಲಿ ರಾಜಭಾಷೆ ಇರಲು ಹೇಗೆ ಸಾಧ್ಯ? ದೇಶದಲ್ಲಿ ಈಗ ಯಾವುದೇ ರಾಜಭಾಷೆಗಳು ಇಲ್ಲ, ಇರುವುದು ನೆಲದ ಭಾಷೆಗಳು, ಜನರ ಭಾಷೆಗಳು. ರಾಜಭಾಷೆ ಎಂಬುದೇ ಪ್ರಜಾಪ್ರಭುತ್ವ ವಿರೋಧಿ ಎಂದು ಅಭಿಪ್ರಾಯಪಟ್ಟರು.
ಜೈಲು ಕೇಸಿಗೆ ಹೆದರಲ್ಲ:
ನಿನ್ನೆ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ನಮ್ಮ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ನಾವು ಪೊಲೀಸರ ಕೇಸು, ಜೈಲಿಗೆ ಹೆದರುವುದಿಲ್ಲ. ಹೆದರಿಸಿ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಸುಳ್ಳು ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂದಕ್ಕೆ ಪಡೆದು, ಅವರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಇಡೀ ರಾಜ್ಯದಾದ್ಯಂತ ನಾವು ಚಳವಳಿ ಸಂಘಟಿಸುತ್ತೇವೆ ಎಂದು ಗುಡುಗಿದರು.