ನಕ್ಸಲ್‌ ಚಟುವಟಿಕೆ ನಿಯಂತ್ರಣ ಹೆಸರಿನಲ್ಲಿ ಎನ್‌ಕೌಂಟರ್‌ ಬೇಡ;  ಸಿಎಂಗೆ ಮನವಿ

Most read

ಬೆಂಗಳೂರು: ನಕ್ಸಲ್‌ ಚಟುವಟಿಕೆಗಳ ನಿಯಂತ್ರಣದ ಹೆಸರಿನಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ ಗಳನ್ನು ನಿಲ್ಲಿಸಬೇಕು ಹಾಗೂ ಶರಣಾದ ಮಾವೋವಾದಿಗಳಿಗೆ ಸೂಕ್ತ ಪುನರ್ವಸತಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ನಾಗರೀಕ ಸಂಘಟನೆಗಳ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಸಾಮಾಜಿಕ ಹೋರಾಟಗಾರರು ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ , ಪ್ರೊ. ನಗರಿ ಬಾಬಯ್ಯ, ಪ್ರೊ. ವಿ.ಎಸ್ ಶ್ರೀಧರ್, ಸಿರಿಮನೆ ನಾಗರಾಜ್ ಹಾಗೂ ತಾರಾ ರಾವ್ ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಿಕ್ರಮ್ ಗೌಡ ಎನ್‌ಕೌಂಟರ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು  ಮನವಿ ಮಾಡಲಾಗಿದೆ. ಹತ್ಯೆಮಾಡಿದ ಪೊಲೀಸರ ಮೇಲೆ ಕ್ರಿಮಿನಲ್‌ ಮೊಕದ್ದಮೆಯನ್ನು ಹೂಡಿ ಎಫ್.ಐ.ಆರ್‌ ದಾಖಲಿಸಬೇಕು. ಈ ಪ್ರಕರಣದಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಿ ನಿಷ್ಪಕ್ಷವಾದ ವಿಚಾರಣೆಗೆ ಅನುವು ಮಾಡಿಕೊಡಬೇಕು. ಸುಪ್ರೀಂ ಕೋರ್ಟಿನ ಆದೇಶದಂತೆ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕು ಎಂದೂ ಮನವಿ ಮಾಡಿದೆ.

ನಕ್ಸಲ್ ಹೋರಾಟದಲ್ಲಿ ತೊಡಗಿಕೊಂಡಿದ್ದ ಹಲವು ಮಾವೋವಾದಿಗಳು ಈಗಾಗಲೇ ಶರಣಾಗತರಾಗಿದ್ದು, ಪ್ರಜಾಸತ್ತಾತ್ವಕ ಹೋರಾಟದಲ್ಲಿ ತೊಡಗಿಸಿಕೊಂಡಿರುವವರಿಗೆ ಸೂಕ್ತ ಪುನರ್ವಸತಿ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ವಿಕ್ರಮ್‌ ಗೌಡ ಎನ್ ಕೌಂಟರ್ ನುಮಾನ ಹುಟ್ಟಿಸುತ್ತದೆ. ಬಂಧನಕ್ಕೆ ಅವಕಾಶಗಳಿದ್ದರೂ ಎನ್‌ಕೌಂಟರ್ ಮಾಡಲಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು. ಕಾಡಿನಲ್ಲಿರುವ ನಕ್ಸಲರು ಶರಣಾಗಲು ಸಿದ್ಧರಿದ್ದರೆ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಸರ್ಕಾರದ ಮನವಿಯ ಹಿನ್ನೆಲೆಯಲ್ಲಿಅನೇಕ ನಕ್ಸಲರು ಶರಣಾಗಿದ್ದಾರೆ. ಅವರಿಗೆ ಸೂಕ್ತ ಪುನರ್ವಸತಿ ಸೌಲಭ್ಯ ನೀಡಬೇಕು. ಸರ್ಕಾರ 2 ಲಕ್ಷ ಪ್ಯಾಕೇಜ್ ಘೋಷಣೆ ಮಾಡಿದ್ದರೂ, ೆಲ್ಲರಿಗೂ ಸಿಕ್ಕಿಲ್ಲ. ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿದೆ.

ಶರಣಾಗತ ನಕ್ಸಲರಿಗೆ ಸೂಕ್ತ ಕಾನೂನು ಸಹಕಾರವನ್ನು ಸರ್ಕಾರ ನೀಡಬೇಕು. ಶರಣಾಗತರಾದವರು ಹತ್ತಾರು ಕೇಸ್‌ಗಳನ್ನು ಎದುರಿಸುತ್ತಿದ್ದಾರೆ. ಕನ್ಯಾಕುಮಾರಿ ಎಂಬ ಶರಣಾಗತ ಮಾವೋವಾದಿ 8 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅವರ ವಿರುದ್ಧ 52 ಪ್ರಕರಣಗಳು ಇವೆ. ಇದೇ ಕಾರಣಕ್ಕೆ ಶರಣಾಗಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶವನ್ನು ಸಿಎಂ ಗಮನಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ.

More articles

Latest article