ಬೆಂಗಳೂರು: ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವು ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಟ್ಟಿದ್ದು, ಶೂನ್ಯ ಅಡಚಣೆಯೊಂದಿಗೆ ಗ್ರಾಹಕರಿಗೆ ವಿದ್ಯುತ್ ಪೂರೈಸುವ ಮೂಲಕ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಸಮನ್ವಯ ಸಾಧಿಸಬೇಕು ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಇಂಧನ ಇಲಾಖೆ ಇಂಜಿನಿಯರುಗಳಿಗೆ ಕರೆ ನೀಡಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ವತಿಯಿಂದ ಸೋಮವಾರ ಸರ್ ಎಂ.ವಿ. ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ಸುವರ್ಣ ಮಹೋತ್ಸವ ಸಂಸ್ಮರಣಾ ಉಪನ್ಯಾಸ, 2026ರ ತಾಂತ್ರಿಕ ದಿನಚರಿ ಬಿಡುಗಡೆ ಹಾಗೂ ನಿವೃತ್ತ ಇಂಜಿನಿಯರುಗಳ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಕೋವಿಡ್ ಬಳಿಕ ವಿದ್ಯುತ್ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾದಾಗ ಅಗತ್ಯ ವಿದ್ಯುತ್ ಪೂರೈಸಲು ನಮ್ಮಲ್ಲಿ ಯೋಜನೆಗಳಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಭೆ ನಡೆಸಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಅದರ ಪರಿಣಾಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ತ್ವರಿತಗೊಂಡು ರಾಜ್ಯವು ವಿದ್ಯುತ್ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ. ಇನ್ನು ಯಾವುದೇ ಅಡಚಣೆಯಿಲ್ಲದಂತೆ ಗ್ರಾಹಕರಿಗೆ ವಿದ್ಯುತ್ ಪೂರೈಸುವತ್ತ ಗಮನ ಹರಿಸಬೇಕು. ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಸರ್ಕಾರ ಹೆಜ್ಜೆ ಇಟ್ಟಿದ್ದು, ಇದಕ್ಕೆ ಇಂಜಿನಿಯರುಗಳು ಸಹಕರಿಸಬೇಕು,” ಎಂದರು.
ಇಂಧನ ಇಲಾಖೆಯ ಇಂಜಿನಿಯರುಗಳ ಹಲವು ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ ಅಪರ ಮುಖ್ಯ ಕಾರ್ಯದರ್ಶಿಯವರು, “ಈ ಬಗ್ಗೆ ಮುಂದಿನ ಸಭೆಗಳಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇಂಜಿನಿಯರುಗಳ ಬೇಡಿಕೆಗಳನ್ನು ಈಡೇರಿಸಿ ಇಲಾಖೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರ್ಕಾರ ಬದ್ಧವಾಗಿದೆ,” ಎಂದು ಹೇಳಿದರು.
ವಿದ್ಯುತ್ ಅವಘಡಗಳನ್ನು ಶೂನ್ಯಕ್ಕೆ ಇಳಿಸಿ:
ದಿನಚರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿದ ಸೆಸ್ಕ್ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, “ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಗ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ವಿದ್ಯುತ್ ಉತ್ಪಾದನಗೆ ಆದ್ಯತೆ ನೀಡಿದ್ದರು. ಬಳಿಕ ಈಗಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಈ ಕಾರ್ಯ ಮುಂದುವರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಕುಸುಮ್-ಸಿ ಯೋಜನೆ ಮೂಲಕ ವಿದ್ಯುತ್ ಉತ್ಪಾದಿಸಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ನಿರಂತರ 7 ಗಂಟೆ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಿದ್ದಾರೆ,” ಎಂದರು.
“ಪ್ರಸ್ತುತ ವಿದ್ಯುತ್ ಉತ್ಪಾದನೆ, ಪೂರೈಕೆಯಲ್ಲಿ ನಾವು ಯಶಸ್ಸು ಸಾಧಿಸುತ್ತಿದ್ದೇವೆ. ಇದರ ಜತೆಗೆ ವಿದ್ಯುತ್ ಸಾಗಣೆ ಮತ್ತು ಪೂರೈಕೆಯಲ್ಲಿ ಆಗುತ್ತಿರುವ ನಷ್ಟವನ್ನು ಇನ್ನಷ್ಟು ಕಡಿಮೆ ಮಾಡಬೇಕು. ಅಲ್ಲದೆ, ವಿದ್ಯುತ್ ಅವಘಡಗಳನ್ನು ಶೂನ್ಯಕ್ಕೆ ತರುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು,” ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಇಸ್ರೋನ ಯು.ಆರ್. ರಾವ್ ಉಪಗ್ರಹ ಕೇಂದ್ರದ ವಿಜ್ಞಾನಿ ರಾಮನಗೌಡ ವಿ. ನಾಡಗೌಡ ಅವರು ಸಂಘದ ಸುವರ್ಣ ಮಹೋತ್ಸವ ಸಂಸ್ಮರಣಾ ಉಪನ್ಯಾಸ ನೀಡಿದರು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶಂಕರ ಎನ್., ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ್ ರಾಜು, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ. ರಮೇಶ್, ಬೆಸ್ಕಾಂ ಹಣಕಾಸು ನಿರ್ದೇಶಕ ಮಹಾದೇವ, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಎಸ್. ಜಗದೀಶ್, ಮೆಸ್ಕಾಂ ತಾಂತ್ರಿಕ ನಿರ್ದೇಶಕ ಹರೀಶ್ ಕುಮಾರ್, ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಇಂಜಿನಿಯರುಗಳ ಸಂಘದ ಪದಾಧಿಕಾರಿಗಳು ಇದ್ದರು. ಕೆಪಿಟಿಸಿಎಲ್ ಇಂಜಿನಿಯರುಗಳ ಸಂಘದ ಅಧ್ಯಕ್ಷ ಬಸವಣ್ಣ ಸಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

