ಬೆಂಗಳೂರು: ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ವಿರುದ್ಧ ಕಲ್ಲೇಶ್ ಎಂಬುವವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿದ್ದ FIR ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಳಿಸಲು ಕೋರಿ ಇಡಿ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿ FIR ರದ್ದುಗೊಳಿಸಲು ಮನವಿ ಮಾಡಿದ್ದರು.
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಯಿತು. ಸರ್ಕಾರದ ಪರ AG ಶಶಿಕಿರಣ್ ಶೆಟ್ಟಿ ವಾದ ಮಂಡನೆ ಮಾಡಿದರು.
ನಿಮಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಇದೆಯಾ..? ಎಂದು ವಾದ ಆರಂಭಕ್ಕೂ ಮೊದಲು ನ್ಯಾಯಾಧೀಶರು ಪ್ರಶ್ನಿಸಿದರು. ಹೌದು, ಮ್ಯಾಜಿಸ್ಟ್ರೇಟ್ ಅನುಮತಿ ನೀಡಿದ್ದಾರೆ ಎಂದು ಎಜಿ ಸ್ಪಷ್ಟನೆ ನೀಡಿದರು.
ವಾಲ್ಮೀಕಿ ನಿಗಮದ ಅವ್ಯವಹಾರ ಕುರಿತಂತೆ ರಾಜ್ಯ ಸರ್ಕಾರ SIT ರಚಿಸಿ ತನಿಖೆ ಮಾಡುತ್ತಿದೆ. ಈಗಾಗಲೇ SIT ತನಿಖೆ ಮುಗಿಯುವ ಹಂತಕ್ಕೆ ಬಂದಿದೆ. ಬಳಿಕ ಪ್ರಕರಣದಲ್ಲಿ ಇ.ಡಿ. ಪ್ರವೇಶವಾಗಿದೆ ಎಂದು ಶಶಿಕಿರಣ್ ನ್ಯಾಯಾಲಯದ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಈಗ ನೀವು ಇ.ಡಿ. ಪ್ರವೇಶದ ಬಗ್ಗೆ ಪ್ರಶ್ನಿಸುತ್ತಿದ್ದೀರಾ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇಲ್ಲ, ಇಡಿ ತನಿಖೆ ಸಂದರ್ಭದಲ್ಲಿ ಆರೋಪಿಗಳಿಗೆ ಮುಖ್ಯಮಂತ್ರಿ, ಮಾಜಿ ಮಂತ್ರಿ ನಾಗೇಂದ್ರ ಹೆಸರು ಹೇಳಲು ಒತ್ತಾಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ ಎಂದು ಸರ್ಕಾರಿ ಅಭಿಯೋಜಕರು ಹೇಳಿದರು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಇಡಿ ಇಬ್ಬರು ಅಧಿಕಾರಿಗಳ ವಿರುದ್ಧ ದಾಖಲಾಗಿರುವ FIR ಗೆ ತಡೆಯಾಜ್ಞೆ ನೀಡಿದರು.