ರಾಜ್ಯದ ನಾಲ್ಕು ವಿಭಾಗಗಳಲ್ಲಿ ಹೈಟೆಕ್ ಪಂಚಕರ್ಮ ಚಿಕಿತ್ಸೆ ಕಲ್ಪಿಸಲು ಯೋಜನೆ: ದಿನೇಶ್‌ ಗುಂಡೂರಾವ್‌

Most read

ಬೆಂಗಳೂರು: ರಾಜ್ಯದ ನಾಲ್ಕು ವಿಭಾಗಗಳಲ್ಲಿ ಹೈಟೆಕ್ ಪಂಚಕರ್ಮ ಚಿಕಿತ್ಸೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಆಯುರ್ವೇದಿಕ್ ಕಾಲೇಜಿನಲ್ಲಿ ನೂತನ ಹೈಟೆಕ್ ಪಂಚಕರ್ಮ ಕೊಠಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಆಯುರ್ವೇದ ಪದ್ದತಿ ಅನುಸರಿಸುವುದರಿಂದ ಕಾಯಿಲೆಗಳು ಬರದಂತೆ ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸಬಹುದು. ಆಯುರ್ವೇದವನ್ನು ನಮ್ಮ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ. ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ಈ ನಿಟ್ಟಿನಲ್ಲಿ ಆಯುರ್ವೇದ ಜಿಕಿತ್ಸಾ ಪದ್ದತಿಗಳನ್ನ ಜನರಿಗೆ ಸುಲಲಿತವಾಗಿ ಒದಗಿಸುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ 5 ಬೆಡ್ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ 10 ಬೆಡ್ ಗಳ ಆಯುರ್ವೇದಿಕ್ ಚಿಕಿತ್ಸಾ ಪದ್ದತಿಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ನೂತನ ಪುರುಷ ವಸತಿಗೃಹ ಮತ್ತು ಹೈಟೆಕ್ ಪಂಚಕರ್ಮ ಕೊಠಡಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರಿನ‌ ಆಯುರ್ವೇದಿಕ್ ಕಾಲೇಜು ಆವರಣದಲ್ಲಿ ಹೈಟೆಕ್ ಪಂಚಕರ್ಮ ಕೊಠಡಿಗಳನ್ನು ಸುಮಾರು ರೂ. 296 ಲಕ್ಷಗಳ ಅಂದಾಜು ವೆಚ್ಚದಲ್ಲಿ ನವೀಕರಿಸಲಾಗಿದೆ. ಜನರಿಗೆ ಅತ್ಯಾಧುನಿಕ ಸೌಕರ್ಯವುಳ್ಳ ಸುಸಜ್ಜಿತ 18 ಹೈಟೆಕ್ ಪಂಚಕರ್ಮ ಕೊಠಡಿಗಳನ್ನು ವಿಶೇಷ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾಗಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಿವಕುಮಾರ್ ಹೇಳಿದರು.

ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಪಂಚಕರ್ಮ ಚಿಕಿತ್ಸೆಯು ಅತ್ಯಂತ ಶ್ರೇಷ್ಟವಾಗಿದ್ದು, ಇದನ್ನು ಸಾಮಾನ್ಯವಾಗಿ ಶೋಧನಾ ಚಿಕಿತ್ಸೆಯೆಂದು ಬಯೋ ಪ್ಯೂರಿಫಿಕೇಷನ್ ಚಿಕಿತ್ಸೆಯೆಂದು ಕರೆಯುತ್ತಾರೆ. ಈ ಚಿಕಿತ್ಸಾ ವಿಧಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲು ಅತ್ಯಾಧುನಿಕ ಸೌಕರ್ಯವುಳ್ಳ ವ್ಯವಸ್ಥೆಯು ಅತ್ಯವಶ್ಯವೆಂದು ಗಮನಿಸಿದ ಕರ್ನಾಟಕ ಸರ್ಕಾರವು ನ್ಯಾಷನಲ್ ಆಯುಷ್ ಮಿಷನ್ ನ ಅನುದಾನದೊಂದಿಗೆ ಈ ವ್ಯವಸ್ಥೆಯನ್ನು ನಿರ್ಮಿಸಿ, ರೂ. 296 ಲಕ್ಷಗಳ ವೆಚ್ಚದಲ್ಲಿ ಸುಸಜ್ಜಿತಗೊಳಿಸಿ ಲೋಕಾರ್ಪಣೆಗೊಳಿಸಿದೆ.

ಈ ಚಿಕಿತ್ಸೆಯಿಂದ ಸಾಂಕ್ರಾಮಿಕವಲ್ಲದ ಜೀವನ ಶೈಲಿಯ ನಿರ್ವಹಣಾ ಲೋಪದಿಂದಾಗುವ (ಲೈಫ್ ಸ್ಟೈಲ್ ಡಿಸಾರ್ಡರ್) ಖಾಯಿಲೆಗಳಿಗೆ ಮತ್ತು ಎಲ್ಲಾ ರೀತಿಯ ವಾತಜನಿತ ಖಾಯಿಲೆಗಳಿಗೆ ಹೆಚ್ಚಿನ ಉಪಯೋಗವಾಗುತ್ತದೆ ಆದುದರಿಂದ ಸಾರ್ವಜನಿಕರು ಈ ಚಿಕಿತ್ಸಾ ಪದ್ಧತಿಯ ಪ್ರಯೋಜನವನ್ನು ಪಡೆದುಕೊಳ್ಳುಬಹುದು. ಜನಸಾಮಾನ್ಯರಿಗೆ ಅತ್ಯುನ್ನತ ಸೌಲಭ್ಯವುಳ್ಳ ಹೈಟೆಕ್ ಪಂಚಕರ್ಮ ಚಿಕಿತ್ಸೆಯು ಅತ್ಯಂತ ಕಡಿಮೆ ವೆಚ್ಚದಲ್ಲಿ ದೊರಕಿದಂತಾಗುತ್ತದೆ ಮತ್ತು ಈ ಕೊಠಡಿಗಳಲ್ಲಿ ಪ್ರತ್ಯೇಕ ಪಂಚಕರ್ಮ ಚಿಕಿತ್ಸೆಗೆ ಬೇಕಾದ ಅತ್ಯಾಧುನಿಕ ಸೌಲಭ್ಯಗಳು ಕೊಠಡಿಯಲ್ಲೇ ಇರುವುದರಿಂದ ಶ್ರೇಷ್ಠ ದರ್ಜೆಯ ಪಂಚಕರ್ಮ ಚಿಕಿತ್ಸೆಯು ಲಭ್ಯವಾಗುತ್ತದೆ.

More articles

Latest article