ರಾಜ್ಯದ ಹಲವೆಡೆ ಇಂದೂ ಮಳೆ ಸಾಧ್ಯತೆ

Most read

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಇಂದೂ ಸಹ ಮಳೆಯಾಗುವ ಸಾಧ್ಯತೆಗಳಿವೆ ಎಂದೂ ವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ತುಂತುರು ಮಳೆ ಆಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಮಂಗಳವಾರ ಹಾಗೂ ಬುಧವಾರವೂ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಇಲಾಖೆ ಪ್ರಕಾರ ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳು ಹಾಗೂ ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು, ಬೆಂಗಳೂರಿನ ಯಲಹಂಕದಲ್ಲಿ ತಲಾ 6 ಸೆಂ.ಮೀ., ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ. ರಾಮನಗರದ ಮಾಗಡಿ, ಬೆಂಗಳೂರಿನ ಟಿ.ಜೆ. ಹಳ್ಳಿ, ಮೈಸೂರಿನ ಸರಗೂರು, ಚಿಕ್ಕಬಳ್ಳಾಪುರದ ಚಿಂತಾಮಣಿ, ಮಂಡ್ಯದ ನಾಗಮಂಗಲ, ಕೋಲಾರದ ರಾಯಲ್ಪಾಡು, ಹಾಸನದ ಬೇಲೂರು, ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿರುವುದು ದಾಖಲಾಗಿದೆ.

More articles

Latest article