ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ಕಳೆದ ಮಂಗಳವಾರ (ಆಗಸ್ಟ್ 27) ನಡೆಸಿದ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಆಗಿರುವ ಗಂಭೀರ ಸ್ವರೂಪದ ಲೋಪದೋಷಗಳನ್ನು ಖಂಡಿಸಿ ನಾಡಿನ ಚಿಂತಕರು, ಹೋರಾಟಗಾರರು, ಸಾಹಿತಿಗಳು ಮತ್ತು ಪರೀಕ್ಷಾರ್ಥಿಗಳು ಮರುಪರೀಕ್ಷೆಗೆ ಆಗ್ರಹಿಸಿದ್ದಾರೆ.
KPSC ನಡೆಸುವ SDA, FDA, KAS ಸೇರಿ ಎಲ್ಲಾ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಹಲವು ಬಾರಿ ಅವಮಾನ ಮಾಡಲಾಗಿದೆ. ಐದಾರು ವರ್ಷಗಳಿಂದ ಹಗಲಿರುಳು ತಪಸ್ಸಿನ ರೀತಿಯಲ್ಲಿ ಓದಿದ ಲಕ್ಷಾಂತರ ಅಭ್ಯರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಭಾಗದ ಪರೀಕ್ಷಾರ್ಥಿಗಳಿಗೆ ಪ್ರಶ್ನೆಪತ್ರಿಕೆಯಲ್ಲೇ ಗೊಂದಲ ಮೂಡಿಸಿ ಭಾರೀ ಅನ್ಯಾಯ ಮಾಡಿದೆ. ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ನಡೆದ ಪತ್ರಿಕೆ-2 ರಲ್ಲಿಯೂ ಸಾಕಷ್ಟು ದೋಷಗಳನ್ನು ಗುರುತಿಸಲಾಗಿದೆ. ಪ್ರಶ್ನೆಪತ್ರಿಕೆಯ ತರ್ಜುಮೆಯಲ್ಲಿ ಮಾಡಿದ ಅನ್ಯಾಯ ಸೇರಿದಂತೆ ಹಲವಾರು ಪ್ರಶ್ನೆಗಳನ್ನು ತಪ್ಪಾಗಿಯೇ ಕೊಡಲಾಗಿದೆ. ಇರುವ 2 ಗಂಟೆ ಅವಧಿಯಲ್ಲಿ ಅಭ್ಯರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಲಾಗಿದೆ ಎಂಬ ಆರೋಪ ಪರೀಕ್ಷೆ ಬರೆದ ಆಕಾಂಕ್ಷಿಗಳಿಂದ ಕೇಳಿಬಂದಿದೆ.
ಹೀಗೆ ಅವೈಜ್ಞಾನಿಕ ಹಾಗೂ ಕನ್ನಡ ವಿರೋಧಿಯಾದ ರೀತಿಯಲ್ಲಿ ಪರೀಕ್ಷೆ ನಡೆಸಿ ಸುಮಾರು 1 ಲಕ್ಷಕ್ಕೂ ಹೆಚ್ಚು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿರುವ KPSC ನಡೆಯ ಕುರಿತು ತಮ್ಮ ಅಸಮಾಧಾನವನ್ನು ಅನೇಕ ಸಾಹಿತಿ ಪ್ರಮುಖರು ಕನ್ನಡ ಪ್ಲಾನೆಟ್ ಜೊತೆ ಹಂಚಿಕೊಂಡಿದ್ದಾರೆ:
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್ ಎನ್ ಮುಕುಂದ್ ರಾಜ್ ಮಾತನಾಡಿ, ಸರ್ಕಾರ ಮುಂದೆ ಬಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯನ್ನು ರದ್ದುಪಡಿಸಿ, ಸರಿಯಾದ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ ಮರುಪರೀಕ್ಷೆಯನ್ನು ನಡೆಸಬೇಕುʼʼ ಎಂದು ಆಗ್ರಹಿಸಿದ್ದಾರೆ.
ಹಿರಿಯ ಸಾಹಿತಿಗಳಾದ ಕುಂ.ವೀರಭದ್ರಪ್ಪನವರು, “ಇದು ನಿರುದ್ಯೋಗಿ ಪದವೀಧರ ಯುವಕರ ಬಾಳಿನಲ್ಲಿ ಆಟವಾಡುತ್ತಿರುವ ಕೆಪಿಎಸ್‌ಸಿಯ ಬೇಜವಾಬ್ದಾರಿತನದ ಪರಮಾವಧಿ. ತಪ್ಪು ತಪ್ಪು ಭಾಷಾಂತರ ಮಾಡಿರುವವರನ್ನು ಮೊದಲು ಕೆಲಸದಿಂದ ವಜಾಗೊಳಿಸಿ ವಿಚಾರಣೆ ಮಾಡಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಹಿರಿಯ ಸಾಹಿತಿ ಕೆ ಮರುಳಸಿದ್ದಪ್ಪ ಅವರು, “ತರ್ಜುಮೆ ಮಾಡುವ ಬದಲು ಕನ್ನಡದಲ್ಲಿಯೇ ಪ್ರಶ್ನೆಪತ್ರಿಕೆಯನ್ನು ಯಾಕೆ ತಯಾರಿಸಬಾರದು. ಇದರಲ್ಲಿ ಕೆಪಿಎಸ್‌ಸಿಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಿದ್ಧ ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ,“ಕರ್ನಾಟಕದ ಆಡಳಿತ ಭಾಷೆ ಕನ್ನಡ ಇದ್ದಾಗ್ಯೂ ಕನ್ನಡದ ಅಭ್ಯರ್ಥಿಗಳಿಗೆ ಆಗಿರುವ ಈ ಅನ್ಯಾಯ ಖಂಡನೀಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದ ಸವಾಲು ಅಂತ ಭಾವಿಸಿಕೊಂಡೇ ಪರೀಕ್ಷೆಗೆ ತಯಾರಿ ನಡೆಸಿರುತ್ತಾರೆ. ಪರೀಕ್ಷೆಯ ಹಾಲ್ ನಲ್ಲಿ ಈ ರೀತಿಯ ಆಘಾತಕಾರಿ ದೋಷಗಳು ಬಂದರೆ ವಿದ್ಯಾರ್ಥಿಗಳ ಭವಿಷ್ಯವೇ ಬೀದಿಗೆ ಬರುತ್ತದೆ. ಸರ್ಕಾರ ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈಗಾಗಲೇ ಸಾಹಿತಿಗಳಾದ, ಎಸ್ ಜಿ ಸಿದ್ದರಾಮಯ್ಯ, ಕುಂ ವೀರಭದ್ರಪ್ಪ, ಚಿತ್ರಸಾಹಿತಿ ಕವಿರಾಜ್ ಹಾಗೂ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಲಿಂಗಾಯತ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿಗಳು, ಕನ್ನಡಪರ ಹೋರಾಟಗಾರರು, ನಾಡಿನ ಬಹುತೇಕ ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮರುಪರೀಕ್ಷೆ ನಡೆಯಬೇಕು, ಕನ್ನಡದಲ್ಲೇ ಮೊದಲು ಪ್ರಶ್ನೆ ಪತ್ರಿಕೆ ತಯಾರಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ.
#KPSC_Mosa #KASReExam ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರಶ್ನೆಪತ್ರಿಕೆಯಲ್ಲಿನ ತಪ್ಪುಗಳು, ಕನ್ನಡ ಭಾಷೆಗೆ ಮೋಸ, ಕನ್ನಡ ಮಕ್ಕಳಿಗೆ ಅನ್ಯಾಯ, ಕೆಪಿಎಸ್‌ಸಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಕನ್ನಡಿಗರಿಗೆ ಅನ್ಯಾಯ ಎಂಬ ಘೋಷವಾಕ್ಯಗಳ ಮೂಲಕ ಇಂದು ಸಂಜೆ 5 ಗಂಟೆಗೆ ಟ್ವಿಟರ್ (X) ಆಂದೋಲನವನ್ನು ಸಹ ನಡೆಸಲಾಗುತ್ತಿದೆ.