ತಿರುಪತಿ: ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನ ಟೋಕನ್ ವಿತರಣಾ ಕೇಂದ್ರಗಳಲ್ಲಿ ಕಾಲ್ತುಳಿತ ಸಂಭವಿಸಿ 6 ಭಕ್ತರು ಸಾವನ್ನಪ್ಪಿದ್ದಾರೆ. ಟೋಕನ್ ಪಡೆದುಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸರತಿ ಸಾಲಿನಲ್ಲಿ ಹೋಗುವಾಗ ಭಕ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ.
ಐವರು ಮಹಿಳೆಯರು, ಓರ್ವ ಪುರುಷ ಮೃತಪಟ್ಟಿದ್ದಾರೆ. ವಿಶಾಖಪಟ್ಟಣದ ರಜನಿ (47), ಲಾವಣ್ಯ (40), ಶಾಂತಿ (34), ಆಂಧ್ರದ ನರಸೀಪಟ್ಟಣಂ ನಿವಾಸಿ ಬೊದ್ದೇಟಿ ನಾಯ್ಡುಬಾಬು, ತಮಿಳುನಾಡಿನ ಸೇಲಂ ನಿವಾಸಿ ಮಲ್ಲಿಕಾ ಮೃತ ದುರ್ದೈವಿಗಳು. ಕರ್ನಾಟಕದ ಬಳ್ಳಾರಿ ಮೂಲದ ನಿರ್ಮಲಾ (50) ಅವರೂ ಅಸು ನೀಗಿದ್ದಾರೆ. ಗಾಯಗೊಂಡಿರುವ 48 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಈಗಾಗಲೇ 32 ಮಂದಿ ಬಿಡುಗಡೆಯಗಿದ್ದಾರೆ.
ಮಲ್ಲಿಕಾ ಎಂಬುವರು ಬೈರಾಗಿ ಪಟ್ಟಿಡಾ ಪಾರ್ಕ್‌ನ ಟೋಕನ್ ಕೌಂಟರ್ ಒಂದರಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲು, ಗೇಟ್‌ಗಳನ್ನು ತೆರೆದಾಗ ನೂಕುನುಗ್ಗಲು ಉಂಟಾಗಿತ್ತು. ಇದು ಕಾಲ್ತುಳಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಘಟನೆಗೆ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಆಘಾತ ವ್ಯಕ್ತಪಡಿಸಿದ್ದಾರೆ . ದೇವರ ದರ್ಶನಕ್ಕೆ ಬಂದ ಭಕ್ತರು ಈ ರೀತಿ ಪ್ರಾಣ ಕಳೆದುಕೊಂಡಿರುವುದು ಬೇಸರ ತಂದಿದೆ. ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ. ಸಚಿವ ನಾರಾ ಲೋಕೇಶ್ ಅವರೂ ಆಘಾತ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ನಡೆಯದಂತೆ ಟಿಟಿಡಿ ಇನ್ನಷ್ಟು ದೃಢವಾದ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮಾತನಾಡಿ, ಕಾಲ್ತುಳಿತಕ್ಕೆ ಜನಸಂದಣಿ ಕಾರಣವಾಗಿದೆ. ಬೇರೆ ಎಲ್ಲಾ ಕೌಂಟರ್ ಗಳಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ಕಾಲ್ತುಳಿತ ಸಂಭವಿಸಿದ ಕೌಂಟರ್ನಲ್ಲಿ ಮಾತ್ರ 4-5 ಸಾವಿರ ಮಂದಿ ಸೇರಿದ್ದರು ಎಂದು ಹೇಳಿದರು. ಟಿಟಿಡಿ ಆಡಳಿತ ಮಂಡಳಿ ಸದಸ್ಯ ಭಾನುಪ್ರಕಾಶ್ ರೆಡ್ಡಿ ಮಾತನಾಡಿ, ಏಕಾದಶಿ ದರ್ಶನಕ್ಕೆ ಟೋಕನ್ ವಿತರಿಸಲು 91 ಕೌಂಟರ್ಗಳನ್ನು ತೆರೆಯಲಾಗಿತ್ತು, ಆದರೂ ಈ ಅವಘಡ ಸಂಭವಿಸಿದೆ. ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ವೈಕುಂಠ ಪ್ರವೇಶಕ್ಕೆ 1.20 ಲಕ್ಷಟೋಕನ್ ವಿತರಣೆ ಮಾಡಲಾಗುತ್ತಿದೆ. ಆದರೆ ಸಧ್ಯಕ್ಕೆ ಟೋಕನ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.