ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಪ್ರಕರಣ: ಅಧಿಕ ಟಿಕೆಟ್ ಮಾರಿದ್ದಕ್ಕೆ ಕೋರ್ಟ್‌ ಗರಂ

Most read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವಾರ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 18 ಪ್ರಯಾಣಿಕರು ಮರಣವನ್ನಪ್ಪಿದ್ದರು. ಪ್ರಯಾಗ್‌ರಾಜ್‌ಗೆ ಹೊರಟಿದ್ದ ರೈಲುಗಳ ಸಾಮರ್ಥ್ಯ ಮೀರಿ ಹೆಚ್ಚುವರಿ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇ ಈ ದುರಂತಕ್ಕೆ ಕಾರಣವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ  ದೆಹಲಿ ಹೈಕೋರ್ಟ್‌ ರೈಲುಗಳ ಸಾಮರ್ಥ್ಯ ಮೀರಿ ಹೆಚ್ಚುವರಿ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇಕೆ  ಎಂದು ಪ್ರಶ್ನಿಸಿದೆ.

ಈ ದುರಂತ ಪ್ರಕರಣ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಡಿ.ಕೆ. ಉಪಾಧ್ಯಾಯ ಮತ್ತು ನ್ಯಾ. ತುಷಾರ್ ರಾವ್ ಗೆಡಾಲೆ ಅವರಿದ್ದ ವಿಭಾಗೀಯ ಪೀಠವು, ಕೇಂದ್ರ ಹಾಗೂ ರೈಲ್ವೆ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ರೈಲ್ವೆ ಕಾಯ್ದೆಯ ಪ್ರಕಾರ ಪ್ರತಿ ಕೋಚ್‌ಗೆ ಪ್ರಯಾಣಿಕರ ಸಂಖ್ಯೆಯನ್ನು ನಿರ್ದಿಷ್ಟ ಸಂಖ್ಯೆಗೆ ನಿರ್ಬಂಧಿಸಬೇಕಿದೆ. ಒಂದೊಮ್ಮೆ ಈ ಕಾಯ್ದೆಯ ಉಲ್ಲಂಘನೆಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಜತೆಗೆ ರೂ.1 ಸಾವಿರ ದಂಡ ವಿಧಿಸಬಹುದಾಗಿದೆ. ಈ ಕಾಯ್ದೆಯಡಿ ಪ್ರಯಾಣಿಕರ ಸಂಖ್ಯೆ ನಿರ್ಬಂಧಿಸಲು ರೈಲ್ವೆ ಇಲಾಖೆ ಕೈಗೊಂಡ ಕ್ರಮಗಳೇನು? ನಿಯಮ ಮೀರಿ ಒಳಬಂದವರ ವಿರುದ್ಧ ದಂಡ ವಿಧಿಸಲಾಗಿದೆಯೇ? ಪ್ರತಿ ಕೋಚ್‌ಗೆ ಗರಿಷ್ಠ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಲಾಗಿದೆಯೇ? ಎಂದು ಹೈಕೋರ್ಟ್ ಸಾಲುಸಾಲು ಪ್ರಶ್ನೆಗಳನ್ನು ಕೇಳಿದೆ.

ರೈಲ್ವೆ ಇಲಾಖೆ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ದುರ್ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ರೈಲ್ವೆ ಇಲಾಖೆ ಪ್ರಕರಣವನ್ನು ಅವಲೋಕಿಸುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 26ರಂದು ನಡೆಯಲಿದೆ.

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಫೆ. 15ರಂದು ಸಂಭವಿಸಿದ ಕಾಲ್ತುಳಿತದಲ್ಲಿ 11 ಮಹಿಳೆಯರು ಹಾಗೂ ಐವರು ಮಕ್ಕಳನ್ನು ಒಳಗೊಂಡು ಒಟ್ಟು 18 ಜನರು ಮೃತಪಟ್ಟಿದ್ದರು. ಸ್ಥಳಾವಕಾಶ ಮೀರಿ ಟಿಕೆಟ್ ಮಾರಾಟ ಮಾಡಿದ್ದೇ ಪ್ರಮುಖ ಕಾರಣವಾಗಿದ್ದು ಎರಡು ಗಂಟೆಯಲ್ಲಿ ಮೂರು ಸಾವಿರ ಟಿಕೆಟ್ ಮಾರಾಟವಾಗಿದೆ ಎಂದು ವರದಿಯಾಗಿದೆ. ರಾತ್ರಿ 10ಕ್ಕೆ ಪ್ರಯಾಗ್‌ರಾಜ್ ಮೂಲಕ ಹೊರಡುವ ಶಿವಗಂಗಾ ಮತ್ತು ಮಗಧ ಎಕ್ಸ್‌ಪ್ರೆಸ್‌ ರೈಲುಗಳ ಮೂಲಕ ಪ್ರಯಾಣಿಸಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿತ್ತು.

More articles

Latest article