ಬೆಂಗಳೂರು: ಕರ್ನಾಟಕಕ್ಕೆ ಭಾರತ ಸರ್ಕಾರದಿಂದ ಕಳೆದ ಹತ್ತು ವರ್ಷಗಳಿಂದ ಆಗಿರುವ ಅನ್ಯಾಯ, ಜಿಎಸ್ ಟಿ ಮೋಸ, ಅನುದಾನಗಳಲ್ಲಿ ತಾರತಮ್ಯದ ಕುರಿತು ಇಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಹಿರಂಗ ಚರ್ಚೆಗೆ ವೇದಿಕೆ ಸಜ್ಜಾಗಿದ್ದು, ರಾಜ್ಯ ಸರ್ಕಾರದ ಸವಾಲು ಸ್ವೀಕರಿಸಿ ಚರ್ಚೆಯಲ್ಲಿ ಭಾಗವಹಿಸುತ್ತಾರಾ ಎಂಬ ಕುತೂಹಲ ಮೂಡಿದೆ.
ಹಲವು ನಾಗರಿಕ ಸಂಘಟನೆಗಳು ಇಂದು ಸಂಜೆ 5 ಗಂಟೆಗೆ ಗಾಂಧಿಭವನದಲ್ಲಿ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಕಂದಾಯ ಸಚಿವ ಹಾಗೂ ಜಿಎಸ್‌ಟಿ ಮಂಡಳಿ ಸದಸ್ಯರಾಗಿರುವ ಕೃಷ್ಣಭೈರೇಗೌಡ ಹಾಗೂ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಆಹ್ವಾನಿಸಿದೆ.
ಈ ಆಹ್ವಾನವನ್ನು ಸಚಿವ ಕೃಷ್ಣಭೈರೇಗೌಡ ಒಪ್ಪಿಕೊಂಡು ಸಂವಾದದಲ್ಲಿ ಭಾಗವಹಿಸಲಿದ್ದು, ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂವಾದದಲ್ಲಿ ಪಾಲ್ಗೊಳ್ಳುವ ಧೈರ್ಯ ತೋರುವರೇ ಎಂಬ ಪ್ರಶ್ನೆ ಉದ್ಭವವಾಗಿದೆ.
ತಾವು ಸಂವಾದದಲ್ಲಿ ಪಾಲ್ಗೊಳ್ಳುವ ಕುರಿತು ಕಂದಾಯ ಸಚಿವ ಕೃಷ್ಣಭೈರೇಗೌಡ ಪತ್ರಿಕಾ ಹೇಳಿಕೆಯೊಂದನ್ನು ನೀಡಿದ್ದು, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸತತವಾಗಿ ಅನ್ಯಾಯವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಜಿಎಸ್‌ಟಿ ತೆರಿಗೆ ಹಂಚಿಕೆ ವಿಚಾರದಲ್ಲಂತೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಹಿರಂಗವಾಗಿಯೇ ಅನ್ಯಾಯ ಎಸಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸಂವಾದಕ್ಕೆ ನನ್ನ ಸಮ್ಮತಿಯಿದ್ದು, ಕೇಂದ್ರ ಸಚಿವೆಯೂ ಸಂವಾದಕ್ಕೆ ಬರಲಿ ಎಂದು ಆಹ್ವಾನಿಸಿದ್ದಾರೆ.
ಹಣಕಾಸು ಆಯೋಗ 2020-21 ನೇ ಸಾಲಿನ ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ ರೂ.5495 ಕೋಟಿ ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅಲ್ಲದೆ, 2021-26ನೇ ಸಾಲಿನ ವರದಿಯಲ್ಲೂ ರೂ.6,000 ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿದೆ. ಒಟ್ಟಾರೆ ಕೇಂದ್ರದಿಂದ ಕರ್ನಾಟಕಕ್ಕೆ ರೂ.11495 ಕೋಟಿ ಹಣ ವಿಶೇಷ ಅನುದಾನದ ರೂಪದಲ್ಲಿ ಬರಬೇಕಿದೆ.
ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಆಯೋಗ ಅಂತಹದ್ದೊಂದು ಶಿಫಾರಸು ಮಾಡೇ ಇಲ್ಲ. ನಾವು ಹಣಕಾಸು ಆಯೋಗದ ಒಂದೇ ಒಂದು ಶಿಫಾರಸ್ಸನ್ನು ಸಹ ತಿದ್ದಲು ಹೋಗುವುದಿಲ್ಲ ಎಂದು ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾ ರಾಜ್ಯಕ್ಕೆ ಅನ್ಯಾಯವೆಸಗುತ್ತಿದ್ದಾರೆ ಎಂದು ಕೃಷ್ಣಭೈರೇಗೌಡ ಆರೋಪಿಸಿದ್ದಾರೆ.
ಒಂದೆಡೆ ಅಮಿತ್ ಶಾ ಸ್ವತಃ ರಾಜ್ಯಕ್ಕೆ ಆಗಮಿಸಿ ಚುನಾವಣಾ ಪ್ರಚಾರದಲ್ಲಿ ರಾಜ್ಯಕ್ಕೆ ನೀಡಬೇಕಾದ ಬರ ಪರಿಹಾರದ ಬಗ್ಗೆ ಸುಳ್ಳು ಹೇಳುತ್ತಿದ್ದರೆ, ನಿರ್ಮಲಾ ಸೀತಾರಾಮನ್ ಅವರಂತೂ ತೆರಿಗೆ ಹಂಚಿಕೆ ಹಾಗೂ ಹಣಕಾಸು ಆಯೋಗದ ಶಿಫಾರಸಿನ ಬಗ್ಗೆ ಹಲವು ದಿನಗಳಿಂದಲೂ ಸರಣಿ ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ಇದರಿಂದ ಜನರೂ ಸಹ ಗೊಂದಲಕ್ಕೀಡಾಗಿದ್ದಾರೆ. ತೆರಿಗೆ ಹಂಚಿಕೆ ಬಗ್ಗೆ ರಾಜ್ಯ ಸರ್ಕಾರ ಹೇಳುತ್ತಿರುವುದು ನಿಜವೇ? ಅಥವಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಿರುವುದು ನಿಜವೇ? ಎಂಬ ಗೊಂದಲ ಅವರನ್ನೂ ಕಾಡುತ್ತಿರುವುದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಮುಖಾಮುಖಿ ಚರ್ಚೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಲಿ ಎಂದು ಅವರು ಹೇಳಿದ್ದಾರೆ.
ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲು ನಾನು ಈಗಾಗಲೇ ಒಪ್ಪಿಗೆ ಸೂಚಿಸಿದ್ದೇನೆ. ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವ ಸ್ಥಾನವನ್ನೂ ಅಲಂಕರಿಸಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಈ ಚರ್ಚೆಯಲ್ಲಿ ಪಾಲ್ಗೊಂಡು ಜಿಎಸ್ಟಿ ತೆರಿಗೆ ಹಂಚಿಕೆ ಕುರಿತು ರಾಜ್ಯದ ಜನ ಸಾಮಾನ್ಯರಲ್ಲಿ ಮೂಡಿರುವ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಈ ಮೂಲಕ ನಾನು ಅವರಲ್ಲಿ ಕೇಳಿಕೊಳ್ಳುತ್ತೇನೆ ಅವರು ವಿನಂತಿಸಿದ್ದಾರೆ.