ನಾಳೆಯಿಂದ ಎಸ್‌ ‍ಎಸ್‌ ‍ಎಲ್‌ ಸಿ ಪರೀಕ್ಷೆ; ಪರೀಕ್ಷೆ ಬರೆಯಲಿರುವ 8,96,447 ವಿದ್ಯಾರ್ಥಿಗಳು; ಬಿಗಿ ಬಂದೋಬಸ್ತ್‌

Most read

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ ‍ಎಸ್‌ ‍ಎಲ್‌ ಸಿ ವಾರ್ಷಿಕ ಪರೀಕ್ಷೆ ನಾಳೆ ಶುಕ್ರವಾರದಿಂದ ಏಪ್ರಿಲ್‌ 4ರ ವರೆಗೂ ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ 3,35,468 ಬಾಲಕರು, 3,78,389 ಬಾಲಕಿಯರು ಸೇರಿ 8,96,447 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 2018 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

2818 ಸ್ಥಾನಿಕ, ಜಿಲ್ಲಾ ಹಂತದಲ್ಲಿ 410, ತಾಲ್ಲೂಕು ಹಂತದಲ್ಲಿ 1662, ವಿಚಕ್ಷಣಾ ದಳವನ್ನು ಪರೀಕ್ಷಾ ಭದ್ರತಾ ದೃಷ್ಟಿಯಿಂದ ನೇಮಿಸಲಾಗಿದೆ. 1117 ಪ್ರಶ್ನೆಪತ್ರಿಕೆ ವಿತರಣಾ ಮಾರ್ಗಗಳನ್ನು ನಿಗದಿ ಮಾಡಲಾಗಿದೆ. ಈ ಬಾರಿ 65,000 ಮೌಲ್ಯಮಾಪಕರು ಮೌಲ್ಯಮಾಪನ ಮಾಡಲಿದ್ದಾರೆ.

ಈ ಬಾರಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಇರಲಿದ್ದು, ಪ್ರತಿ ಜಿಲ್ಲೆಯಲ್ಲೂ ಆಯಾ ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರಗಳ ಸ್ಥಿತಿಗತಿಗಳನ್ನು ವೀಕ್ಷಿಸಲಿದ್ದಾರೆ. ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಪರಿಗಣಿಸಿ ಜೆರಾಕ್ಸ್‌ ಸೆಂಟರ್‌, ಸೈಬರ್‌ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ.  ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ.

ಉತ್ತೀರ್ಣರಾಗಲು ಶೇ.35 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಕಳೆದ ವರ್ಷ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿ ಮಾಡಿದ್ದರಿಂದ ಫಲಿತಾಂಶದಲ್ಲಿ ಕುಸಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕನಿಷ್ಟ ಉತ್ತೀರ್ಣ ಅಂಕಗಳನ್ನು ಶೇ.35ರಿಂದ ಶೇ.25ಕ್ಕೆ ಇಳಿಸಲಾಗಿತ್ತು. ಆದರೆ, ಈ ವರ್ಷ ಹಿಂದಿನ ನಿಯಮದಂತೆ ಶೇ.35ಕ್ಕೆ ನಿಗದಿ ಮಾಡಲಾಗಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ಗಳಿಸುವತ್ತ ಗಮನ ಹರಿಸಬೇಕೆಂದು ಕೋರಲಾಗಿದೆ.

More articles

Latest article