ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ಇಂದಿನಿಂದ ಆರಂಭವಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ-1, ಮಾರ್ಚ್ 21 ರಿಂದ ಏಪ್ರಿಲ್ 4, 2025 ರವರೆಗೆ ನಡೆದಿತ್ತು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯತ್ತಿದ್ದು, ಮೌಲ್ಯಮಾಪನ ಕಾರ್ಯದಲ್ಲಿ 35 ಜಿಲ್ಲೆಗಳ ಸರಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಬಾಗವಹಿಸಿದ್ದಾರೆ. ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮೇ 2ನೇ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆಗಳಿವೆ. 2024 ರಲ್ಲಿ ನಡೆದ ಪರೀಕ್ಷೆಯಲ್ಲಿ 6,31,204 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ.81.11ರಷ್ಟು ಬಾಲಕಿಯರು ಮತ್ತು ಶೇ.65.90 ರಷ್ಟು ಬಾಲಕರು ತೇರ್ಗಡೆ ಹೊಂದಿದ್ದರು. 2024 ರಲ್ಲಿ ಮೇ 9 ರಂದು ಫಲಿತಾಂಶ ಪ್ರಕಟವಾಗಿತ್ತು.
ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನ/ಮರುಪರಿಶೀಲನೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಮಂಡಳಿಯ ಅರ್ಜಿ ನಮೂನೆಯನ್ನು ಆನ್ ಲೈನ್ ಅಥವಾ ಆಫ್ ಲೈನ್ ಮೋಡ್‌ನಲ್ಲಿ ಅಗತ್ಯ ಶುಲ್ಕದೊಂದಿಗೆ ಸಲ್ಲಿಸಬೇಕು.
ವಿದ್ಯಾರ್ಥಿಗಳು ನಿರಾಶರಾಗಬೇಕಿಲ್ಲ. ಮತ್ತೆ ಎರಡು ಅವಕಾಶಗಳಿರುತ್ತವೆ: ಪರೀಕ್ಷೆ-1ರಲ್ಲಿ ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕಗಳು ಲಭಿಸದಿದ್ದರೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಇನ್ನೂ ಎರಡು ಅವಕಾಶಗಳಿರುತ್ತದೆ. ಈ ಪರೀಕ್ಷೆಗಳು ಜೂನ್ ಮತ್ತು ಜುಲೈ ತಿಂಗಳಲ್ಲಿ ಜರುಗಲಿವೆ.