ಬೆಂಗಳೂರು: 2025- 2026ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮೊದಲ ಹಂತದ ಪೂರ್ವ ಸಿದ್ದತಾ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಜನವರಿ 5ರಿಂದ ಆರಂಭವಾಗಲಿವೆ.
ಪೂರ್ವ ಸಿದ್ದತಾ ಪರೀಕ್ಷೆಗಳು ಮೂರು ಹಂತಗಳಲ್ಲಿ ನಡೆಯಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೊದಲ ಹಂತದ ಪರೀಕ್ಷೆಯು ಜನವರಿ 5ರಿಂದ 10ರವರೆಗೆ; ಎರಡನೇ ಹಂತದ ಪರೀಕ್ಷೆಯು ಜನವರಿ 27ರಿಂದ ಫೆಬ್ರುವರಿ 2ರವರೆಗೆ ಮತ್ತು ಮೂರನೇ ಹಂತದ ಪರೀಕ್ಷೆಯು ಫೆಬ್ರುವರಿ 23ರಿಂದ 28ರವರೆಗೆ ನಡೆಯಲಿದೆ.
ಮುಖ್ಯ ಪರೀಕ್ಷೆಗೆ ಸಹಾಯಕವಾಗುವ ರೀತಿಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪ್ರಯೋಜನಕಾರಿಯಾಗಲಿದೆ. ಮಂಡಳಿಯ ವೆಬ್‌ಸೈಟ್‌ನಿಂದ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಎಲ್ಲ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.
ಮುಖ್ಯ ಪರೀಕ್ಷೆಯ ಮಾದರಿಯಲ್ಲೇ ಈ ಪರೀಕ್ಷೆಗಳನ್ನೂ ಪಾರದರ್ಶಕವಾಗಿ ನಡೆಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸೂಚನೆಯಲ್ಲಿ ತಿಳಿಸಲಾಗಿದ್ದು, ಎಲ್ಲಾ ಶಾಲೆಗಳಿಗೆ ಮಾರ್ಗದರ್ಶನ ಮಾಡುವಂತೆ ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಲಾಗಿದೆ.
ಪರೀಕ್ಷೆ ಮುಗಿದ ಮರುದಿನವೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಬೇಕಿದೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ವೇಳಾ ಪಟ್ಟಿ 2025ರ ನವೆಂಬರ್‌ನಲ್ಲೇ ಪ್ರಕಟವಾಗಿದೆ. ಮಾರ್ಚ್ 18ರಂದು ಆರಂಭವಾಗಲಿದ್ದು, ಏಪ್ರಿಲ್ 2 ಕ್ಕೆ ಮುಕ್ತಾಯವಾಗಲಿದೆ.

