Sunday, July 14, 2024

ವಿಶೇಷ ಚೇತನ ಮಕ್ಕಳಿಗೆ ಬೇಕಿದೆ ಸಮಾಜದ ಪ್ರೀತಿ

Most read

ವಿಶೇಷ ಚೇತನ ಮಕ್ಕಳ ಹೆತ್ತವರಿಗೆ ಇಂತಹ ಮಕ್ಕಳನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ವಿಶೇಷ ಚೇತನರೊಂದಿಗೆ ಸಮಾಜ ಹೊಂದ ಬೇಕಾದ ಕನಿಷ್ಠ ಸೌಜನ್ಯ, ಸಂವೇದನಾಶೀಲತೆಯ ಕುರಿತು ಅರಿವು ಮೂಡಿಸುವುದು ಬಹಳ ಅಗತ್ಯ. ಮಂಗಳೂರು ವಿ.ವಿ ಯ ಡಾ.ನಯನ ಕೃಷ್ಣಾಪುರ ಇವರು, ಆಟಿಸಂʼ ಮಗುವನ್ನು ಹೊಂದಿದ ತನ್ನ ಗೆಳತಿಯ ಅಳಲಿಗೆ ಕಿವಿಯಾಗಿದ್ದಾರೆ, ಅಕ್ಷರರೂಪ ನೀಡಿದ್ದಾರೆ.

ಹೊಸ ವರುಷವು ನಮ್ಮ ಮನೆ ಮನಗಳಲ್ಲಿ ಹೊಸ ಹರುಷ ತುಂಬಲಿ ಅಂತ ಎಲ್ಲರೂ ಆಶಿಸುತ್ತಾರೆ. ಬದುಕಿನಲ್ಲಿ ಅದೆಷ್ಟು ಸಮಸ್ಯೆಗಳು, ಆತಂಕಗಳು ತುಂಬಿದ್ದರೂ ಹೊಸ ವರುಷ ಹೊಸತನವನ್ನು ತರಲಿ ಎಂಬುದು ಎಲ್ಲರ ಆಶಯ. ನಾನು ಕೂಡ ಹೊಸ ವರುಷಕ್ಕೆ ಹಲವು ಕನಸುಗಳನ್ನು ಮನಸ್ಸಿಗೆ ತಂದುಕೊಂಡಿದ್ದೆ. ಈ ಕನಸುಗಳು ನನಸಾಗಲಿ ಅಥವಾ ಆಗದೇ ಇರಲಿ ನಾವೆಲ್ಲರೂ ಹೊಸ ವರುಷದ  ಶುಭಾಶಯಗಳನ್ನು ಪ್ರತಿ ವರುಷ ತಪ್ಪದೇ ಎಲ್ಲರಿಗೂ ಹೇಳಿದ್ದೇವೆ ಮತ್ತು ಹೇಳುತ್ತಲೇ ಇರುತ್ತೇವೆ. ಆದರೆ ನಮ್ಮೊಳಗಿನ ಕಹಿಯನ್ನು ನಾವು ಇನ್ನೊಬ್ಬರಿಗೆ  ಹಂಚುವುದು ಎಷ್ಟು ಸರಿ?

ಈ ಹೊಸ ವರುಷ ನನ್ನ ಮಗನ ಬಾಳಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ತರಲಿ  ಅಂತ ನಾನು ಆಶಿಸಿದೆ. ಎಲ್ಲರ ಆಶಯದ ಕ್ರಮಗಳು ಬೇರೆ ಬೇರೆ ಇರುತ್ತವೆ.  ಹಾಗೆ ನಾನು ಕೂಡ. ಹೊಸ ವರುಷದ ದಿನ  ದೇವಸ್ಥಾನಕ್ಕೆ ಹೋಗಿ ಮಗನ ಹೆಸರಿನಲ್ಲಿ ಒಂದು ಅರ್ಚನೆ ಮಾಡಿಸುವ ಅಂತ ಅಂದುಕೊಂಡಿದ್ದೆ.  ನಾನು ಮತ್ತು ಅಮ್ಮ ಹಾಗೆ ಅಂದುಕೊಳ್ಳುತ್ತಿದ್ದಂತೆ ಮಗ ಕೂಡ ದೇವಸ್ಥಾನಕ್ಕೆ ಹೋಗಲು ಉತ್ಸಾಹವನ್ನು ತೋರಿದ. ಮಗನ ಖುಷಿಯಲ್ಲಿಯೇ ಪ್ರಪಂಚವನ್ನು ಕಾಣುವ ನನಗೆ ಹೊಸದೊಂದು ಹುರುಪು ಸಿಕ್ಕ ಹಾಗಾಯಿತು.  ನಾನು, ಅಮ್ಮ ಮತ್ತು ಮಗ ದೇವಸ್ಥಾನದಲ್ಲಿ ತುಂಬಾ ಹೊತ್ತು ಕಳೆದೆವು. ಮಗ ತುಂಬಾ ಖುಷಿಯಲ್ಲಿದ್ದ. ಅದು ನಾನು ಹುಟ್ಟಿ ಬೆಳೆದ ಊರು. ಅಲ್ಲಿನ   ಪರಿಸರದಲ್ಲಿ ನನ್ನ ಬಾಲ್ಯವನ್ನು ಕಳೆದಿರುವುದರಿಂದ  ನನ್ನ ಮನಸು ಕೂಡ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಿತ್ತು. ದೇವಸ್ಥಾನದ ಅರ್ಚಕರಿಗೆ ನನ್ನ ಮಗನ ಮೇಲೆ ವಿಶೇಷ ಕಾಳಜಿ. ಅವನು ದೇವಸ್ಥಾನಕ್ಕೆ ಬಂದಾಗೆಲ್ಲಾ ಅವನನ್ನು ಮಾತನಾಡಿಸದೆ ಇರುವುದಿಲ್ಲ. ಹೊಸ ವರುಷಕ್ಕೋ ಏನೋ ದೇವಸ್ಥಾನಕ್ಕೆ ಭಕ್ತಾದಿಗಳು ಎಂದಿಗಿಂತ ಸ್ವಲ್ಪ ಜಾಸ್ತಿಯೇ ಬಂದಿದ್ದರು.

ಮಹಾ ಮಂಗಳಾರತಿ ಆಗುವ ಸಮಯ.. ನಾವೆಲ್ಲರೂ ಎದ್ದು ನಿಂತುಕೊಂಡೆವು. ಒಮ್ಮೆಲೇ ಗಂಟೆಗಳ ನಿನಾದ ಎಲ್ಲೆಡೆಯಿಂದ ಕೇಳಿಬಂತು.. ನನ್ನ ಮಗನ ಖುಷಿಯೆಲ್ಲಾ ಒಮ್ಮೆಲೇ ಭಯದ ಸ್ವರೂಪವನ್ನು ಪಡೆದುಕೊಂಡಿತು. ಗಂಟೆಯ ಸದ್ದನ್ನು ನಿಲ್ಲಿಸಲು ಅವನು ಚಡಪಡಿಸುತ್ತಿದ್ದ.  ಅವನಿಗೆ ಆ ಸದ್ದನ್ನು ಕೇಳಲು ಆಗಲಿಲ್ಲ..ಜೋರಾಗಿ ಅಳತೊಡಗಿದ. ನನಗೂ ಏನು ಮಾಡಬೇಕೆಂದು ತಿಳಿಯದೆ ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದೆ.  ಗಂಟೆಯ ಸದ್ದಿಗೆ ಅವನು ಈ ತರಹ ಪ್ರತಿಕ್ರಿಯಿಸಿದ್ದು ನನಗೂ ಹೊಸತು. ಅವನಿಗೆ ಧೈರ್ಯ ತುಂಬುವ ಪ್ರಯತ್ನದಲ್ಲಿ ನಾನಿದ್ದೆ..  ಮನಸ್ಸಿನ ಆತಂಕವನ್ನು ಮಾತಿನಲ್ಲಿ ಹೇಳಲು ಸಾಧ್ಯವಾಗದೆ  ಅವನು ಗಂಟೆ ಬಾರಿಸುತ್ತಿದ್ದ ಮಹಿಳೆಯ ಸೀರೆಯನ್ನು ಹಿಡಿದು ಎಳೆದ. ಅವರು ಸಿಟ್ಟಿನಿಂದ ಪ್ರತಿಕ್ರಿಯಿಸಿದರು. ನಾನು ವಿಚಲಿತಗೊಂಡೆ..ನನ್ನ ಮಗನಿಂದ ಯಾರಿಗೂ ತೊಂದರೆಯಾಗಬಾರದು ಎಂದು ನಾನು ಕೂಡಲೇ ಅವನನ್ನು ಕರೆದುಕೊಂಡು ಹೊರಬಂದೆ.  ಅವನನ್ನು ಸಮಾಧಾನಿಸಲು  ಕಷ್ಟವಾಯಿತು. ಹೇಗೋ ಅವನನ್ನು  ಸಮಾಧಾನಿಸಿ ದೇವಸ್ಥಾನದ ಹೊರಗಡೆ ಕುಳಿತಿದ್ದೆ. ಅವನು ಸಮಾಧಾನಗೊಂಡ ನಂತರ ನಾನು ನೆಮ್ಮದಿಯ ಉಸಿರನ್ನು ಬಿಟ್ಟೆ.  ಈ ನಿರಾಳತೆಯನ್ನು ಅನುಭವಿಸಿದವರಿಗೆ ಗೊತ್ತು ಅದು ಹೇಗಿರುತ್ತೆ ಎಂದು. ಆದರೆ ನನಗೆ ಹೆಚ್ಚು ಹೊತ್ತು ಅದನ್ನು ಅನುಭವಿಸಲು ಆಗಲಿಲ್ಲ. ಯಾಕೆಂದರೆ ನನ್ನ ಮಗು ಅತ್ತು ಗಲಾಟೆ ಮಾಡಿದ ಎನ್ನುವ ಕಾರಣಕ್ಕೆ ನನಗೆ ಉಪದೇಶ ನೀಡಲು ಸರದಿ ಸಾಲಿನಲ್ಲಿ ಹತ್ತಾರು ತಾಯಂದಿರು ನಿಂತಿದ್ದರು. ಅವರ ಮಾತು ಮತ್ತು ನೋಟ ನನ್ನ ಮನಸ್ಸಿಗೆ ಅಳಿಸಲಾಗದ ಗಾಯವನ್ನು ಮಾಡಿತು.

ನಾನು ತಾಯಿಯಾಗಿ ಮಗುವನ್ನು ಚೆನ್ನಾಗಿ ಬೆಳೆಸಿಲ್ಲ ಎಂದು ಒಬ್ಬರು ಅಂದರೆ ಇನ್ನೊಬ್ಬರು  ದೇವಸ್ಥಾನದಲ್ಲಿ ಅತ್ತು ಗಲಾಟೆ ಮಾಡಿದ್ದಕ್ಕೆ ಮಗುವನ್ನೇ  ತರಾಟೆಗೆ ತೆಗೆದುಕೊಂಡರು. ಅವನಿಗೆ ಅವರ ಚುಚ್ಚು ಮಾತು ಮತ್ತು ನೋಟದ ಹಿಂದಿರುವ ಕಹಿ ಮನಸ್ಥಿತಿ ಅರ್ಥವಾಗಲಿಲ್ಲ. ಅವನು ಸುಮ್ಮನೆ ಇದ್ದ. ಆದರೆ ಅವರ  ಮಾತುಗಳು ನಿಲ್ಲಲೇ ಇಲ್ಲ. ಒಬ್ಬರಾದ ಮೇಲೆ ಇನ್ನೊಬ್ಬರು  ನನ್ನ ಮೇಲೆ ಮಾತಿನ ಪ್ರಹಾರ ನಡೆಸಿದರು. ಕೆಲವರು ಬುದ್ಧಿ ಮಾತು ಹೇಳಿದರು. ನಾನು ಮಗನನ್ನು ಬೆಳೆಸಿದ ರೀತಿ ಸರಿಯಿಲ್ಲ ಎಂದೆಲ್ಲಾ ಮಾತನಾಡಿದರು. ನಾನು ಹೇಳುತ್ತಲೇ ಇದ್ದೆ. ನನ್ನ ಮಗ ಎಲ್ಲಾ ಮಕ್ಕಳ ಹಾಗಲ್ಲ. ಅವನಿಗೆ autism ಇದೆ. ಶಬ್ದ ಸಂವೇದನೆಯನ್ನು ತಡೆದುಕೊಳ್ಳುವ ಶಕ್ತಿ ಅವನಿಗಿಲ್ಲ. ಆದರೆ ಅವರೆಲ್ಲರೂ  ನಾನು ತಾಯಿಯಾಗಿ ನನ್ನ ಜವಾಬ್ದಾರಿಯನ್ನು ಮರೆತಿದ್ದೇನೆ. ಮಗನಿಗೆ ಎಲ್ಲಿ ಹೇಗಿರಬೇಕು ಅಂತ ಕಲಿಸಿಲ್ಲ ಅನ್ನೋದನ್ನ ಪದೇ ಪದೇ ಹೇಳುತ್ತಲೇ ಇದ್ದರು. ಅವರಲ್ಲಿ ಒಬ್ಬರು ನಾನು autism ಅಂತ ಅಂದ ಸ್ವಲ್ಪ ಹೊತ್ತಿನಲ್ಲಿಯೇ ಇಲ್ಲೇ ಹತ್ತಿರದಲ್ಲಿ  ಇಂತಹ ಮಕ್ಕಳಿಗಾಗಿ ಒಂದು ಸಂಸ್ಥೆ ಇದೆ. ಅಲ್ಲಿಗೆ ಸೇರಿಸಿ ಅವನನ್ನು ಎಂದರು. ಮಗುವಿಗೆ ಆರು -ಏಳು ವರುಷ ಆಗಿರಬೇಕಲ್ಲ. ಇನ್ನು ಎಲ್ಲಿ ಹೇಗಿರಬೇಕು ಅಂತ ಕಲಿಯದಿದ್ದರೆ ಹೇಗೆ? ಎಂದರು. ನಾನು ಅವರಿಗೆ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಿದೆ.   ನನ್ನ ಅಮ್ಮ  ಮಧ್ಯ ಪ್ರವೇಶಿಸಿ ತಮ್ಮ ಮಾತುಗಳನ್ನು ನಿಲ್ಲಿಸುವಂತೆ  ಅವರಲ್ಲಿ ವಿನಂತಿಸಿದರು. ಆದರೂ ಚುಚ್ಚು ಮಾತುಗಳು, ಬುದ್ಧಿಮಾತುಗಳು, ಅನಗತ್ಯ ಸಲಹೆಗಳು ನಿಲ್ಲಲೇ ಇಲ್ಲ. ನಾನು ಕಣ್ಣೀರು ಹಾಕಿದ್ದು ಬಿಟ್ಟರೆ ಬೇರೇನೂ ಮಾಡಲಾಗಲಿಲ್ಲ.. ಬದುಕಿನಲ್ಲಿ ಸೋತು ಹೋದೆ ಅನ್ನುವ ಭಾವನೆ ಮನಸ್ಸು ತುಂಬಿತು. ವಿಷಯ ತಿಳಿದ ಅರ್ಚಕರು   ನನಗೆ ಉಪದೇಶ ಮಾಡಲು ಬಂದಿರುವ ತಾಯಂದಿರಿಗೆ   ‘ನೀವು ನಿಮ್ಮ ಕೆಲಸ ನೋಡಿಕೊಳ್ಳಿ’  ಎಂದು ಹೇಳಿ ಕಳುಹಿಸಿದರು.

ನನ್ನ ಹೊಸ ವರುಷ ಹೀಗೆ ಆರಂಭವಾಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ.  ಮತ್ತೆ ಮತ್ತೆ ಕಂಗಳು ತುಂಬಿ ಬಂತು. ನಾನು ಯಾಕೆ ಅಳುತ್ತಿದ್ದೇನೆ ಅಂತ ಗೊತ್ತಾಗುತ್ತಿರಲಿಲ್ಲ.. ನನ್ನ ಮಗ ಯಾವಾಗಲೂ ಒಂದು ಮಾತು ಹೇಳ್ತಾ ಇದ್ದ.’ ನಾನು ಅಳುತ್ತಿಲ್ಲ ಅಮ್ಮ.. ನನ್ನ ಕಣ್ಣುಗಳು ಅಳುತ್ತಿವೆ ಎಂದು’. ನನಗೂ ಹಾಗೆಯೇ ಅನಿಸಿತು. ಮನಸ್ಸು ಹೇಳುತ್ತಲೇ ಇತ್ತು. ಅಳಬೇಡವೆಂದು.. ಆದರೆ ಕಂಗಳು ಕೇಳಲೇ ಇಲ್ಲ…..  ನನ್ನ ಮಗನ ಬಗ್ಗೆ ತಿಳಿದಿರುವವರು, ನನ್ನ ಸ್ನೇಹಿತರು ನನ್ನ ನೋವಿಗೆ ಸ್ಪಂದಿಸಿದರು. ಆ ದಿನ ರಾತ್ರಿ ದೇವಸ್ಥಾನದಿಂದ ಕರೆಯೊಂದು ಬಂದಿತ್ತು.   ಮತ್ತೊಮ್ಮೆ ದೇವಸ್ಥಾನಕ್ಕೆ ಬನ್ನಿ ಎಂದು. ಮನಸ್ಸು ತಿಳಿಯಾಗಿರಲಿಲ್ಲ. ಆದರೂ ಇನ್ನೊಮ್ಮೆ ಹೋಗಿ ಬಂದೆವು.  ಮಗ ಆರಾಮವಾಗಿ ಖುಷಿಯಾಗಿದ್ದ.  ಅರ್ಚಕರು ನನ್ನ ಮಗುವಿನ ಮೇಲೆ ತೋರಿಸಿದ ಕಾಳಜಿಯನ್ನು ನೋಡಿ ನಮ್ಮ ನೋವಿಗೂ ಸ್ಪಂದಿಸುವ ಜನರು  ಇದ್ದಾರೆ ಎಂದು ತಿಳಿಯಿತು.  ಆದರೆ ಮನಸ್ಸಿಗಾದ ನೋವು ಮಾತ್ರ ಇನ್ನೂ ಹಾಗೆ ಇದೆ.   ಮನದ ಮೂಲೆಯಲ್ಲಿ ಯಾಕೆ ಹೀಗೆ? ಎನ್ನುವ ಪ್ರಶ್ನೆ ಮತ್ತೆ ಮತ್ತೆ  ಪ್ರತಿಧ್ವನಿಸುತ್ತಿರುತ್ತದೆ.. ನನ್ನ ಮನದ ಮಾತು ಇಲ್ಲಿನ ಎಲ್ಲರ ಮನವನ್ನು ತಲುಪಬೇಕು ಮತ್ತು ನಮ್ಮನ್ನು ನೋಡುವ ದೃಷ್ಟಿ ಬದಲಾಗಬೇಕು  ಎನ್ನೋದು ನನ್ನ ಆಶಯ.

ಹೊರನೋಟಕ್ಕೆ ಅನುಭವಿ ತಾಯಂದಿರು ತಮ್ಮ ಅನುಭವಗಳನ್ನು ಕಿರಿಯ ತಾಯಂದಿರಿಗೆ ತಿಳಿ ಹೇಳುವುದರಲ್ಲಿ ತಪ್ಪೇನಿದೆ ಎಂದು ನಮಗೆ ಅನಿಸಬಹುದು. ಆದರೆ ನಾವು  ಇನ್ನೊಬ್ಬರಿಗೆ ಉಪಕಾರ ಮಾಡುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ನಮಗೆ ತಿಳಿದು ಮತ್ತು ತಿಳಿಯದೆ ಎಷ್ಟೋ ಮನಸ್ಸುಗಳನ್ನು  ನೋಯಿಸಿದ್ದೇವೆ.  ಬಹುಶಃ, ಸಲಹೆಯನ್ನು ನೀಡುವುದಕ್ಕೂ ಒಂದು ಕ್ರಮವಿದೆ ಅನ್ನೋದನ್ನ ನಾವು ಮರೆತಿದ್ದೇವೆ.  ಯಾರೂ ಕೇಳದೆ ಸಲಹೆಯನ್ನು ನೀಡುವ ಅಗತ್ಯ ಇದೆಯಾ? ನಾವಾಡುವ ಮಾತುಗಳು ಅವರ ಮನಸ್ಸು ಮತ್ತು ಬದುಕಿನ ಮೇಲೆ ಎಷ್ಟು ಪರಿಣಾಮವನ್ನು ಬೀರುತ್ತದೆ ಎಂದು ನಮಗೆ ತಿಳಿದಿದೆಯೇ?

ಇಂತಹ ಸನ್ನಿವೇಶಗಳು ವಿಶೇಷ ಚೇತನ ಸಮುದಾಯದ ತಾಯಂದಿರ ಬದುಕಿನಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತದೆ.  ಸಾರ್ವಜನಿಕ ಸ್ಥಳಗಳಲ್ಲಿ ಮಗುವೊಂದು ಅತ್ತು ಗಲಾಟೆ ಮಾಡಿದರೆ ನಮಗೆ ಯಾಕೆ ಕಿರಿಕಿರಿಯಾಗಬೇಕು?. ನಮ್ಮ ಮನೆಯ ಮಕ್ಕಳು ಯಾವತ್ತೂ ಅತ್ತು ಗಲಾಟೆ ಮಾಡಿಲ್ಲವೇ? ಒಂದು ವೇಳೆ ನಮ್ಮ ಮಕ್ಕಳು ಅತ್ತು ಗಲಾಟೆಯೇ ಮಾಡಿಲ್ಲವೆಂದಾದರೆ ನಮ್ಮ ಮಕ್ಕಳ ಪಾಲನೆ ಜಗತ್ತಿನ ಅತಿಶ್ರೇಷ್ಠ ಪಾಲನೆ ಹೇಗಾಗುತ್ತದೆ?  ಅಥವಾ ಮಕ್ಕಳು ಅತ್ತು ಗಲಾಟೆ ಮಾಡಿದರೆ ತಾಯಂದಿರ ಪಾಲನೆಯಲ್ಲಿ ಲೋಪದೋಷವನ್ನು ಹುಡುಕುವುದು ಎಷ್ಟು ಸರಿ?  ನಮ್ಮ ಮಾತುಗಳು ಮತ್ತು ನೋಟಗಳು ಇನ್ನೊಬ್ಬರ ಭಾವನೆಗಳನ್ನು ನೋಯಿಸುತ್ತದೆ ಎನ್ನುವ ಸರಳ ವಿಚಾರ ಯಾಕೆ ನಮ್ಮ ಗಮನಕ್ಕೆ  ಬರುವುದಿಲ್ಲ?

ಇಲ್ಲಿ ನಾವೆಲ್ಲರೂ ತಿಳಿದುಕೊಳ್ಳಬೇಕಾದ ವಿಚಾರವೊಂದಿದೆ. ವಿಶೇಷ ಚೇತನ ಮಕ್ಕಳ ತಾಯಂದಿರಲ್ಲಿ ಯಾವ ವಿಶೇಷ ಶಕ್ತಿಯೂ ಇರುವುದಿಲ್ಲ.  ನಮ್ಮ ನಿಮ್ಮೆಲ್ಲರ ಹಾಗೆ ಅವರು ಕೂಡ. ನಾವೆಲ್ಲರೂ  ಹೇಗೆ ನಮ್ಮ ಮಕ್ಕಳ  ಖುಷಿಗಾಗಿ, ಬೆಳವಣಿಗೆಗಾಗಿ ಒದ್ದಾಡುತ್ತೇವೆಯೋ  ಹಾಗೆ ಅವರು ಕೂಡ. ಆದರೆ ನಮ್ಮ ದೈನಂದಿನ ಬದುಕಿನ ಕಿರಿಕಿರಿಯ ಎರಡರಷ್ಟು ಹೋರಾಟದ ಬದುಕು ಅವರದ್ದು. ಹಾಗಂತ ಅವರ ಬದುಕಿನಲ್ಲಿ ಸಂತೋಷದ ಕ್ಷಣಗಳೇ ಇಲ್ಲವೆಂದಲ್ಲ. ವಿಶಿಷ್ಟ ಚೇತನರ ತಾಯಂದಿರು ಸಣ್ಣ ಸಣ್ಣ ವಿಚಾರಗಳಲ್ಲಿ ಆನಂದವನ್ನು ಅನುಭವಿಸುವವರು ಮತ್ತು ಸಂಭ್ರಮಿಸುವವರು. ಅಲ್ಲದೇ, ಅವರು ನಿಮ್ಮ ಒಳ್ಳೆಯ ಸ್ನೇಹಿತರಾಗಲು ಅರ್ಹರು.

ನನ್ನ ಈ ವಿಶ್ಲೇಷಣೆ ಹಲವರಿಗೆ ಇಷ್ಟವಾಗದೆ ಇರಬಹುದು. ನಮ್ಮ ನಡುವೆ ಅತಿಹೆಚ್ಚು ವ್ಯತ್ಯಾಸವಿಲ್ಲ ಎನ್ನುವ ಆಶಯವನ್ನು ವ್ಯಕ್ತಪಡಿಸಲು ವಿಶೇಷ ಚೇತನರ ತಾಯಂದಿರ ಬದುಕನ್ನು ಸರಳವಾಗಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮ ಮಾತುಗಳು ಮತ್ತು ನೋಟಗಳು ನಮ್ಮ ನಡುವೆ ಹೋರಾಟದ ಬದುಕನ್ನು ಅನುಭವಿಸುವ ತಾಯಂದಿರಿಗೆ ನೋವನ್ನು ತರದಿರಲಿ. ನಿಮ್ಮ ಸ್ನೇಹಿತರಲ್ಲಿ ಯಾರಾದರೂ ವಿಶೇಷ ಚೇತನರ ತಾಯಂದಿರು ಇದ್ದರೆ ನಿಮಗೆ ಬಿಡುವಾದಾಗ ಅವರ ಕ್ಷೇಮ ಸಮಾಚಾರವನ್ನು ವಿಚಾರಿಸಲು ಮರೆಯದಿರಿ.

ಡಾ.ನಯನ ಕೃಷ್ಣಾಪುರ

ಸಂಶೋಧನಾ ಸಹಾಯಕಿ, ನೆಹರು ಚಿಂತನ ಕೇಂದ್ರ, ಮಂಗಳೂರು ವಿ ವಿ.

More articles

Latest article