ಸಿಯೋಲ್: ಮುವಾನ್‌ನಲ್ಲಿ ಅಪಘಾತಕ್ಕೀಡಾದ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿತ್ತು. ದುರಂತ ಸಂಭವಿಸುವುದಕ್ಕೆ ಕೆಲವೇ ಕ್ಷಣಗಳ ಮೊದಲು ಅಪಾಯದ ಘೋಷಣೆ ಮಾಡಲಾಗಿತ್ತು ಎಂದು ಜೆಜು ಏರ್ ವಿಮಾನಯಾನ ಸಂಸ್ಥೆಯ ಜೆಟ್ ಪೈಲಟ್ ಹೇಳಿದ್ದಾರೆ ಎಂದು ದಕ್ಷಿಣ ಕೊರಿಯಾದ ಸಾರಿಗೆ ಸಚಿವಾಲಯ ತಿಳಿಸಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಮುವಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಿಗ್ಗೆ ಆಗಮಿಸಿದ ವಿಮಾನವು, ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿತ್ತು. ರನ್‌ವೇನಿಂದ ಜಾರಿ ಕಾಂಕ್ರಿಟ್ ಗೋಡೆಗೆ ಡಿಕ್ಕಿಯಾಗಿ, ತಕ್ಷಣವೇ ಸ್ಫೋಟಗೊಂಡಿತ್ತು. ವಿಮಾನದಲ್ಲಿ 6 ಮಂದಿ ಸಿಬ್ಬಂದಿ ಮತ್ತು 175 ಪ್ರಯಾಣಿಕರಿದ್ದುಈ ಪೈಕಿ ಇಬ್ಬರು ಮಾತ್ರ ಬದುಕುಳಿದಿದ್ದಾರೆ. ಈ ದುರಂತವು ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ದುರಂತಗಳಲ್ಲಿ ಒಂದಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ರನ್‌ವೇನಿಂದ ಜಾರಿದ ವಿಮಾನವು ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟಗೊಂಡಿದ್ದು. ವಿಮಾನದಲ್ಲಿದ್ದ 181 ಮಂದಿಯ ಪೈಕಿ 179 ಮಂದಿ ಅಸು ನೀಗಿದ್ದಾರೆ. ವಿಮಾನವು ರನ್‌ವೇ ಮೇಲೆ ಇಳಿಯುವ ಸಂದರ್ಭದಲ್ಲಿ ಅದರ ಮುಂದಿನ ಚಕ್ರವು ಸರಿಯಾಗಿ ತೆರೆದುಕೊಂಡಿರಲಿಲ್ಲ ಎಂದು ಗೊತ್ತಾಗಿದೆ. ರಕ್ಷಣಾ ಸಿಬ್ಬಂದಿಯು ಇಬ್ಬರನ್ನು ವಿಮಾನದಿಂದ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇವರಿಬ್ಬರೂ ವಿಮಾನದ ಸಿಬ್ಬಂದಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಬೋಯಿಂಗ್ 737–800 ಮಾದರಿಯ ಈ ವಿಮಾನವು ಬ್ಯಾಂಕಾಕ್‌ನಿಂದ ಮರಳುತ್ತಿತ್ತು.
ವಿಮಾನವನ್ನು ಆವರಿಸಿದ್ದ ಬೆಂಕಿಯನ್ನು ಆರಿಸಲು ಅಗ್ನಿಶಾಮಕ ಸಿಬ್ಬಂದಿ ಒಟ್ಟು 32 ಅಗ್ನಿಶಾಮಕ ಟ್ರಕ್ ಮತ್ತು ಹಲವು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದ್ದರು. ವಿಮಾನವು, ರನ್‌ವೇ ದಾಟಿ ಕಾಂಕ್ರೀಟ್ ಗೋಡೆಯೊಂದಕ್ಕೆ ಗುದ್ದಿದ ದೃಶ್ಯಗಳು ವೈರಲ್ ಆಗಿದ್ದು, ವಿಮಾನದ ಬಹುಭಾಗ ನಾಶವಾಗಿದೆ. ಆದರೆ ವಿಮಾನ ನಿಲ್ದಾಣ ನಿಯಂತ್ರಣ ಕೇಂದ್ರವು, ವಿಮಾನಕ್ಕೆ ಹಕ್ಕಿ ಬಡಿದಿರಬಹುದು ಎಂಬ ಎಚ್ಚರಿಕೆಯನ್ನು ಪೈಲಟ್‌ಗೆ ರವಾನಿಸಿತ್ತು ಎಂಬುದು ಪರಿಶೀಲನೆಯಿಂದ ಗೊತ್ತಾಗಿದೆ.