ಟ್ರಿನಿಡಾಡ್ ಅಂಡ್ ಟೊಬಾಗೋ: ಸೆಮಿಫೈನಲ್ ತಲುಪಿದ ಸಂಭ್ರಮದಲ್ಲಿ ತೇಲುತ್ರಿದ್ದ ಅಫಘಾನಿಸ್ತಾನ ತನ್ನ ಶಕ್ತಿಗನುಸಾರ ಆಡಲಿಲ್ಲ. ಮಾರಕ ಬೌಲಿಂಗ್ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ ತಂಡ ಪಂದ್ಯವನ್ನು ಎರಡೇ ಗಂಟೆಗಳಲ್ಲಿ ಗೆದ್ದು ಫೈನಲ್ ಗೇರಿತು.
ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಇಂದು ರಾತ್ರಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಗೆಲ್ಲವ ತಂಡದೊಂದಿಗೆ ಟಿ20 ವಿಶ್ವಕಪ್ ಫೈನಲ್ ಟ್ರೋಫಿಗಾಗಿ ಸೆಣಸಲಿದೆ.
ಇಲ್ಲಿನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫಘಾನಿಸ್ತಾನ ಈ ಸರಣಿಯಲ್ಲಿ ಅತ್ಯಂತ ಕೆಟ್ಟ ಆಟ ಪ್ರದರ್ಶಿಸಿತು. ಅಫಘಾನಿಸ್ತಾನ ಪರ ಅತಿ ದೊಡ್ಡ ಸ್ಕೋರ್ ಅಂದರೆ ರೆಹಮತ್ತುಲ್ಲಾ ಗುರ್ಬಾಜ್ ಗಳಿಸಿದ 10 ರನ್ ಎಂದರೆ ತಂಡದ ಪ್ರದರ್ಶನ ಎಷ್ಟು ಕೆಟ್ಟದಾಗಿತ್ತು ಎಂದು ಊಹಿಸಬಹುದು. 11.5 ಓವರ್ ಗಳಲ್ಲಿ ಅಫಘಾನಿಸ್ತಾನ 56 ರನ್ ಗಳಿಗೆ ಆಲ್ ಔಟ್ ಆಯಿತು. ತಬ್ರೇಜ್ ಶಂಸಿ, ಮಾರ್ಕೋ ಜಾನ್ಸನ್ ತಲಾ ಮೂರು ವಿಕೆಟ್ ಉರುಳಿಸಿದರು.
ಅಫಘಾನಿಸ್ತಾನ ನೀಡಿದ 57 ರನ್ ಗಳ ಗುರಿ ದಕ್ಷಿಣ ಆಫ್ರಿಕಾಗೆ ಸವಾಲೇ ಆಗಿರಲಿಲ್ಲ. 8.5 ಓವರ್ ಗಳಲ್ಲೇ ಅದು ಗೆಲುವಿನ ಔಪಚಾರಿಕತೆ ಮುಗಿಸಿತು. ರೀಜಾ ಹೆಂಡ್ರಿಕ್ಸ್ (29), ಏಡನ್ ಮಾರ್ಕ್ರಮ್ (23) ಒಂಭತ್ತನೇ ಓವರ್ ನಲ್ಲೇ ಗೆಲುವು ತಂದಿಟ್ಟರು.
ಅದ್ಭುತ ಬೌಲಿಂಗ್ ಪ್ರದರ್ಶಿಸಿ ಅಫಘಾನಿಸ್ತಾನದ ಅಗ್ರಕ್ರಮಾಂಕದ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳಿಸಿದ ಮಾರ್ಕೋ ಜಾನ್ಸನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದರು.