ಬೆಂಗಳೂರು: ಎಚ್ ಎ ಎಲ್ ಪೊಲೀಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಕ್ಕೆ ಕೇಬಲ್ ಸುತ್ತಿಕೊಂಡ ಪರಿಣಾಮ ನಿಯಂತ್ರಣ ತಪ್ಪಿ ಕೆಳಗೆ ರಸ್ತೆಗೆ ಬಿದ್ದ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೊಮ್ಮನಹಳ್ಳಿ ನಿವಾಸಿ ರೋಹಿತ್ ಆರ್.ಪಾಟೀಲ್ (26) ಮೃತ ಸವಾರ. ಐಟಿಪಿಎಲ್ ರಸ್ತೆಯ ರಾಮೇಶ್ವರಂ ಕೆಫೆ ಸಮೀಪದ ಪಾಸ್‌ಪೋರ್ಟ್ ಕಚೇರಿ ಬಳಿ ಘಟನೆ ಸಂಭವಿಸಿದೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರೋಹಿತ್ ಮೃತ ದುರ್ದೈವಿ. ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಹಾದು ಹೋಗಿದ್ದ ಕೇಬಲ್ ದ್ವಿಚಕ್ರ ವಾಹನದ ಚಕ್ರಕ್ಕೆ ಸುತ್ತಿಕೊಂಡು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅದ ವೇಳೆಗೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ರೋಹಿತ್ ಅವರ ಮೇಲೆ ಹರಿದಿದೆ. ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಎಚ್‌ಎಎಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.