ಬೆಂಗಳೂರು: ಹೊಸದಾಗಿ ಮೀಟರ್‌ಗಳನ್ನು ಅಳವಡಿಸಿಕೊಳ್ಳುವವರಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಹಳೆಯ ಮೀಟರ್ ಇರುವವರಿಗೆ ಬಲವಂತ ಇಲ್ಲ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೆಶಕ ಪಂಕಜ್ ಕುಮಾರ್ ಪಾಂಡೆ ಸ್ಪಷ್ಟಪಡಿಸಿದ್ದಾರೆ. ಸ್ಮಾರ್ಟ್ ಮೀಟರ್ ಯೋಜನೆ ಕೇಂದ್ರ ಸರ್ಕಾರದ್ದು ಎಂದರು.
ಕೆಲವು ನಿಬಂಧನೆಗಳಂತೆ ಆರ್.ಡಿ.ಎಸ್. ಎಸ್ ಯೋಜನೆಯಡಿಯಲ್ಲಿ ಹೊಸ ಮೀಟರ್ ವ್ಯವಸ್ಥೆಯನ್ನು ಜಾರಿ ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಒಟ್ಟಿಗೆ ಹಳೆ ಮೀಟರ್ ಗಳನ್ನು ತೆಗೆದು ಹೊಸ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಿಕೊಳ್ಳವ ವ್ಯವಸ್ಥೆ ಇದೆ ಎಂದು ಸಮಜಾಯಿಸಿ ನೀಡಿದರು.
ಈ ಪದ್ದತಿಯನ್ನು ಕರ್ನಾಟಕದಲ್ಲಿ ತಿರಸ್ಕರಿಸಿದ್ದೇವೆ. ಬದಲಾಗಿ ಹೊಸೆ ಮನೆ ಕಟ್ಟಿದಾಗ ಮತ್ತು ಹಳೆ ಮೀಟರುಗಳು ದುರಸ್ತಿಗೆ ಒಳಪಟ್ಟಾಗ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಗ್ರಾಹಕರಿಗೆ ತಿಳಿಸಿದ್ದೇವೆ. ಹಳೆ ಮೀಟರ್ ಗಳು ಹಾಗೆಯೇ ಉಳಿದುಕೊಳ್ಳುತ್ತವೆ ಎಂದರು. ಹೊಸ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಗ್ರಾಹಕರು 5000 ರೂಗಳನ್ನು ಕಟ್ಟಬೇಕು. ಅದರ ನಿರ್ವಹಣೆಗಾಗಿ ಹತ್ತು ವರ್ಷಗಳ ಕಾಲ ರೂ. 116ಗ ಮೊತ್ತವನ್ನು ಪ್ರತಿ ತಿಂಗಳು ಪಾವತಿಸಬೇಕು ಎಂದರು.
ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವಿಪಕ್ಷಗಳ ಆಪಾದನೆಗೆ ಉತ್ತರಿಸಿದ ಬೆಸ್ಕಾಂ ಎಂಡಿ ಡಾ.ಎಂ ಶಿವಶಂಕರ್ ಅವರು ಆ ರೀತಿಯ ಭ್ರಷ್ಟಾಚಾರ ಇಲ್ಲ, ಬಡವರಿಗೆ ಯಾವುದೇ ಹೊರೆಯಾಗುವುದಿಲ್ಲ. ಟೆಂಡರ್ ಸೇರಿದಂತೆ ಎಲ್ಲವೂ ಪಾರದರ್ಶಕತೆಯಿಂದ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ಬಗ್ಗೆ ಮಾತನಾಡಿದ ಪಂಕಜ್ ಕುಮಾರ್ ಪಾಂಡೆ, ಕಳೆದ ವರ್ಷ ಉತ್ತಮ ಮಳೆಯಾಗಿದೆ ಆದ್ದರಿಂದ ರೈತರು ಎರಡು ಬೆಳೆಗಳನ್ನ ಬೆಳೆದಿದ್ದಾರೆ ಇದರಿಂದಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಇದನ್ನು ಸರಿದೂಗಿಸಲು ಹೊರ ರಾಜ್ಯಗಳಾದ ಉತ್ತರ ಪ್ರದೇಶ ಮಧ್ಯಪ್ರದೇಶ ಮತ್ತು ಪಂಜಾಬ್ ನಿಂದ ವಿದ್ಯುತ್ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ. ಇನ್ನು ಜಲ ವಿದ್ಯುತ್, ಥರ್ಮಲ್ ವಿದ್ಯುತ್, ಪವನ ವಿದ್ಯುತ್ ಸ್ಥಾವರಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ನಮ್ಮಲ್ಲಿ ಹೆಚ್ಚಿಗೆ ಉದ್ಪಾದನೆಯಾದಾಗ ಮತ್ತೆ ಅವರಿಗೆ ತೆಗೆದುಕೊಂಡ ವಿದ್ಯುತ್ ಅನ್ನು ವಾಪಸ್ ಕೊಡುತ್ತೇವೆ ಎಂದರು.
ಇದೀಗ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಸಂಜೆ 6 ರಿಂದ ಬೆಳಗಿನ ಜಾವ 6 ರವರೆಗೆ ಸಿಂಗಲ್ ಫೇಸ್ ನಲ್ಲಿ ವಿದ್ಯುತ್ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ವಿದ್ಯುತ್ ಸಂಗ್ರಹ ರಾಜ್ಯದಲ್ಲಿ ಚೆನ್ನಾಗಿದೆ. ರೈತರು, ವಿದ್ಯಾರ್ಥಿಗಳಿಗೆ ಕ್ರಮ ಕೈಗೊಂಡಿದ್ದೇವೆ ಎಂದರು.