ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಇಂಧನ ಇಲಾಖೆಯ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕರು ಹೂಡಿದ್ದ ಖಾಸಗಿ ದೂರನ್ನು ಹೈಕೋರ್ಟ್ ವಜಾಗೊಳಿಸಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ನೂರಾರು ಕೋಟಿ ರೂ. ಅಕ್ರಮ ನಡೆದಿದೆ ಎಂದು ಹುಯಿಲೆಬ್ಬಿಸಿದ್ದ ಬಿಜೆಪಿ ನಾಯಕರಿಗೆ ಮುಖಭಂಗವಾದಂತಾಗಿದೆ.
ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಹೈಕೋರ್ಟ್ ಪೀಠವು, ಸಚಿವ ಕೆ.ಜೆ.ಜಾರ್ಜ್ ವಿರುದ್ಧದ ಖಾಸಗಿ ದೂರನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಜತೆಗೆ ಇಂಧನ ಇಲಾಖೆಯ ಗೌರವ್ ಗುಪ್ತ ಹಾಗೂ ಹೆಚ್.ಜೆ. ರಮೇಶ್ ವಿರುದ್ಧದ ಪ್ರಕರಣಗಳನ್ನೂ ಹೈಕೋರ್ಟ್ ರದ್ದುಪಡಿಸಿದೆ. ಮೂರನೇ ಪ್ರತಿವಾದಿಯಾಗಿದ್ದ ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಈಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣ ಕೈಬಿಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

