ಮಹಾನಗರಿಗಳಲ್ಲಿ ಹೆಚ್ಚಿನವರ ಜಗತ್ತು ನಡೆಯುವುದು ಕೂತಲ್ಲೇ ಮೂಡಿ ಮರೆಯಾಗುತ್ತಿರುವ ಅಸಂಖ್ಯಾತ ಕ್ಲಿಕ್ಕುಗಳಲ್ಲಿ. ಇಲ್ಲಿ ನಡಿಗೆ ವಿರಳ. ಮಂದಿಯೊಂದಿಗೆ ನೈಜ ಒಡನಾಟಗಳು ವಿರಳಾತಿ ವಿರಳ. ದಿಲ್ಲಿಯಲ್ಲಿ ಅದೆಷ್ಟು ನಡೆದರೂ ಕೆಲ ಕಾಲ ಇಹಪರಗಳ ಚಿಂತೆಯಿರದೆ, ಸ್ಮಾರ್ಟ್‍ಫೋನುಗಳ ಕಿರಿಕಿರಿಯಿಲ್ಲದೆ ನಾನು ಹಾಯಾಗಿ ಕೈಬೀಸಿಕೊಂಡು ನಡೆಯುವುದೆಂದರೆ ನಮ್ಮೂರಿಗೆ ಹೋದಾಗಲೇ. – ʼಮೆಟ್ರೋ ಟೈಮ್ಸ್ʼ ಅಂಕಣದಲ್ಲಿ ಪ್ರಸಾದ್ ನಾಯ್ಕ್, ದೆಹಲಿ.
ಮಹಾನಗರಗಳು ನಮ್ಮನ್ನು ಇಷ್ಟಿಷ್ಟೇ ಆವರಿಸುವ, ನಿಧಾನವಾಗಿ ಬದಲಿಸುವ ಪರಿಯು ನನ್ನನ್ನು ಆಗಾಗ ಕಾಡುವುದುಂಟು. ಇತ್ತೀಚೆಗಷ್ಟೇ ಇಂಗ್ಲೆಂಡಿನ ಸೆಮಿ ಅರ್ಬನ್ ಪ್ರದೇಶವೊಂದಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ನನ್ನ ಸಹಪಾಠಿಯೊಬ್ಬ ಕರೆ ಮಾಡಿದ್ದ. ಅವನಿರುವ ಪ್ರದೇಶವು ಲಂಡನ್ ಮಹಾನಗರಕ್ಕಿಂತ ತಕ್ಕಮಟ್ಟಿನ ದೂರದಲ್ಲಿದೆಯಂತೆ. ಈ ಹಿಂದೆ ಅವನು ಬೆಂಗಳೂರು ಮತ್ತು ದುಬೈ ಸೇರಿದಂತೆ ಹಲವು ಮಹಾನಗರಗಳಲ್ಲಿ ತನ್ನ ದಿನಗಳನ್ನು ಸವೆಸಿದವನು. ಅದರಂತೆ ಸಹಜವಾಗಿ ಮಹಾನಗರಗಳಲ್ಲಿರುವ ಭಯಂಕರ ವೇಗದ ಜೀವನಶೈಲಿಗೆ ತನ್ನನ್ನು ತಾನು ಒಗ್ಗಿಸಿಕೊಂಡವನು.
ಹೀಗೆ ಅತ್ತ ಹಳ್ಳಿಯೂ ಅಲ್ಲದ, ಇತ್ತ ಮಹಾನಗರಿಯೂ ಅಲ್ಲದ ಪುಟ್ಟ ಶಹರವೊಂದಕ್ಕೆ ಬಂದು ಸೇರಿಕೊಂಡಿದ್ದರಿಂದ, ಸದ್ಯ ಆ ನಿಧಾನಗತಿಯ ಜೀವನಶೈಲಿಗೆ ತನ್ನನ್ನು ತಾನು ಪ್ರೊಗ್ರಾಮಿಂಗ್ ಮಾಡುವ ಪ್ರಕ್ರಿಯೆಯು ಅವನಲ್ಲಿ ಕೊಂಚ ನಿಧಾನವಾಗಿಯೇ ಮುಂದುವರಿದಿದೆ. ಏನು ಕೆಲಸದ ಹೊತ್ತಿಗೆ ಫೋನ್ ಮಾಡಿದೆಯಲ್ಲ ಮಾರಾಯ ಅಂದೆ. “ಇಲ್ಲಿ ಹಾಗೇನಿಲ್ಲ. ಕೊಟ್ಟಿರುವ ಕೆಲಸವನ್ನು ನೆಟ್ಟಗೆ ಮಾಡಿದರೆ ಸಾಕು. ಅದಕ್ಕೆ ಆಫೀಸಿಗೆ ಹೋಗಲೇಬೇಕು, ದಿನವಿಡೀ ಕಂಪ್ಯೂಟರ್ ಮುಂದೆ ಕೂರಬೇಕು, ಹಿರಿಯ ಅಧಿಕಾರಿಗಳ ಪದತಲದಲ್ಲಿ ಚಮಚಾಗಿರಿ ಮಾಡಬೇಕು, ವಾರಾಂತ್ಯಗಳಲ್ಲೂ ದುಡಿಯಬೇಕು ಅಂಥವುಗಳೇನಿಲ್ಲ. ಒಂದು ರೀತಿಯಲ್ಲಿ ಹಾಯಾಗಿದೆ ಬದುಕು”, ಎನ್ನುತ್ತಿದ್ದ ಅವನು. ದುಬೈ, ದೆಹಲಿ, ಬೆಂಗಳೂರಿನಂತಹ ಶಹರಗಳಲ್ಲಿ ದುಡಿಯುವ ಹಲವಾರು ಮಂದಿ ಕೊನೆ ಮೊದಲಿಲ್ಲದಂತೆ ದುಡಿಯುತ್ತಾ, ಆಟೋಪೈಲಟ್ ಮೋಡಿನಲ್ಲಿ ಸವೆಯುತ್ತಾ ತಮ್ಮನ್ನು ತಾವು ಕತ್ತೆಗಳೆಂದೋ ಅಥವಾ ರೋಬೋಟುಗಳೆಂದೋ ವಿಧಿಯಿಲ್ಲದೆ ಒಪ್ಪಿಕೊಂಡಾಗಿದೆ. ಅಂಥದ್ದರಲ್ಲಿ ನಿನಗಾದರೂ ಕೆಲ ಕಾಲ ಮನುಷ್ಯನಾಗಿ ಬದುಕುವ ಭಾಗ್ಯ ಸಿಕ್ಕಿತಲ್ಲ ಎಂದು ನಕ್ಕೆ. ಹೌದೌದೆಂದು ಅವನೂ ಒಪ್ಪಿದ.
ನೀವೇ ಒಂದು ಕ್ಷಣ ಯೋಚಿಸಿ ನೋಡಿ. ನಮ್ಮ ನಡುವಿನ ಕತೆ, ಕಾದಂಬರಿ, ಸಿನೆಮಾಗಳು ಮಹಾನಗರಿಗಳ ಬಗ್ಗೆ ಏನೇನೋ ತಪ್ಪುಕಲ್ಪನೆಗಳನ್ನು, ಪೂರ್ವಾಗ್ರಹಗಳನ್ನು ನಮ್ಮಲ್ಲಿ ಹುಟ್ಟಿಸಿರುತ್ತವೆ. ಉದಾಹರಣೆಗೆ ಪಾಶ್ಚಾತ್ಯ ದೇಶಗಳಲ್ಲಿ ಎಲ್ಲರೂ ಸಿರಿವಂತರು, ಮಹಾನಗರಗಳಲ್ಲಿ ಉದ್ಯೋಗ ಸಿಗುವುದು ಬಹಳ ಸುಲಭ, ಇಲ್ಲಿಯ ಯುವಕ-ಯುವತಿಯರು ಬಹಳ “ಫಾಸ್ಟು”… ಹೀಗೆ ಏನೇನೋ! ಆದರೆ ಅಸಲಿ ತರಲೆ-ತಾಪತ್ರಯಗಳು ಅಲ್ಲಿ ಸ್ವತಃ ಇದ್ದವರಿಗಷ್ಟೇ ಗೊತ್ತಿರುತ್ತವೆ. ಸಂಶೋಧನೆಯ ನಿಮಿತ್ತ ಸ್ವಿಟ್ಝರ್ ಲ್ಯಾಂಡಿಗೆ ತೆರಳಿದ್ದ ಉಡುಪಿ ಮೂಲದ ನನ್ನ ಗೆಳೆಯನೊಬ್ಬ ಬದುಕು ಅದೆಷ್ಟು ನೀರಸವಾಗಿದೆ ಎಂದು ನನ್ನಲ್ಲಿ ಖಾಸಗಿಯಾಗಿ ಹೇಳಿಕೊಂಡಿದ್ದ. ಅವನು ಹೇಳುವಂತೆ ಏಷ್ಯನ್ ಮಂದಿಯ ಜೊತೆ ಬೆರೆಯುವ ವಿಚಾರದಲ್ಲಿ ಸ್ಥಳೀಯ ಸ್ವಿಸ್ ಮಂದಿಗೆ ವಿಶೇಷ ಆಸಕ್ತಿಯೇನೂ ಇರಲಿಲ್ಲ. ಇದಕ್ಕೆ ದೇಹದ ಬಣ್ಣ, ಜನಾಂಗೀಯ ಕಾರಣಗಳೂ ಇರಬಹುದು. ಒಟ್ಟಿನಲ್ಲಿ ಸ್ಥಳೀಯರೊಂದಿಗೆ ಬೆರೆಯುವುದು, ಹೊಸ ಸ್ನೇಹಿತರನ್ನು ಗಳಿಸುವುದು ಇತ್ಯಾದಿಗಳೆಲ್ಲ ಅಂದುಕೊಂಡಷ್ಟು ಸುಲಭವೇನಲ್ಲ ಎಂದು ನಿಟ್ಟುಸಿರಾಗುತ್ತಿದ್ದ ಆತ.
ಲಂಡನ್ ಪಕ್ಕದ ಶಹರದಲ್ಲಿ ಬೀಡುಬಿಟ್ಟಿರುವ ನನ್ನ ಗೆಳೆಯನದ್ದೂ ಇದೇ ಸಮಸ್ಯೆ. ಸುಮ್ಮನೆ ನಡೆಯುತ್ತಾ ಅಲ್ಲಿಯ ಬೀದಿಗಳನ್ನು ಸುತ್ತುತ್ತಿರು, ಹೊಸತೇನಾದರೂ ಸಿಕ್ಕಲೂಬಹುದು ಎಂಬುದು ಅವನಿಗೆ ನನ್ನ ಬಿಟ್ಟಿ ಸಲಹೆ. ಲೇಖಕ ರಸ್ಕಿನ್ ಬಾಂಡ್ ತನ್ನ ಏಕತಾನತೆ ಮತ್ತು ಒಬ್ಬಂಟಿತನವನ್ನು ಹೋಗಲಾಡಿಸಲು ಹೀಗೆ ಮಾಡುತ್ತಿದ್ದರಂತೆ. ಇದರಿಂದಾಗಿ ಕಾಲ್ನಡಿಗೆಯೆಂಬುದು ತನ್ನ ಬದುಕಿನ ಒಂದು ದೊಡ್ಡ ಭಾಗವಾಯಿತು ಎಂದು ಅವರು ಒಂದೆಡೆ ಬರೆಯುತ್ತಾರೆ. ದಿಲ್ಲಿಯಲ್ಲೂ ಈ ಬಗೆಯ ಕಸರತ್ತುಗಳನ್ನು ನಾನು ಸಾಕಷ್ಟು ಮಾಡಿದ್ದಿದೆ. ಕೈ-ಹೆಗಲು-ಭುಜಗಳ ಮೇಲೆ ಭಾರಗಳು ಕಮ್ಮಿಯಿದ್ದಷ್ಟು ನಡಿಗೆ ಸಲೀಸು. ನೀವೇನೇ ಹೇಳಿ. ಮಹಾಉದ್ದೇಶಗಳಿಲ್ಲದ ಕಾಲ್ನಡಿಗೆಯ ಹುಡುಕಾಟಗಳು ಒಟ್ಟಾರೆಯಾಗಿ ನೀಡುವ ಖುಷಿ ದೊಡ್ಡದು.
ಬದುಕಿನ ಇಂತಹ ಚಿಕ್ಕಪುಟ್ಟ ಖುಷಿಗಳಿಗೆ ಕೂಡ ಕಮರ್ಷಿಯಲ್ ಲೇಪವನ್ನು ಹಚ್ಚುವ ಚಾಲಾಕಿತನವು ಮಹಾನಗರಗಳಲ್ಲಿ ಈಗಾಗಲೇ ಸಾಮಾನ್ಯವಾಗಿಬಿಟ್ಟಿದೆ. ಹಾಗಂತ ಇಂಥದ್ದೊಂದು ಐಡಿಯಾವನ್ನು ಮೊದಲಬಾರಿ ಕಾರ್ಯರೂಪಕ್ಕೆ ತಂದ ಮಹಾನುಭಾವನನ್ನು ನಾನು ಜೀನಿಯಸ್ ಅನ್ನುವುದಿಲ್ಲ. ಏಕೆಂದರೆ ಕಾಲ್ನಡಿಗೆಗೂ ಕಾಸು ಕೇಳುವ ಐಡಿಯಾಗಳು ಮಹಾನಗರಗಳಲ್ಲಿ ಮಾತ್ರ ಯಶಸ್ವಿಯಾಗಬಲ್ಲವು. ದಿಲ್ಲಿಯಂತಹ ನಗರಗಳಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಕೋಟೆಗಳು, ಸ್ಮಾರಕಗಳು, ಅರಮನೆಯಂತಹ ಸ್ಥಳಗಳನ್ನು ಕೇಂದ್ರವಾಗಿಟ್ಟುಕೊಂಡು ಸಾಮಾನ್ಯವಾಗಿ ಹೆರಿಟೇಜ್ ವಾಕ್ ಗಳನ್ನು ಆಯೋಜಿಸುತ್ತಾರೆ. ಹಲವು ಸ್ಥಳೀಯರು ಇದರಲ್ಲಿ ಭಾಗವಹಿಸುತ್ತಾರೆ ಕೂಡ! ಇನ್ನು ರೋಡ್ ಟ್ರಿಪ್ ಹೆಸರಿನಲ್ಲಿ ಕ್ಯಾಬ್ ಗಳಲ್ಲಿ ಕುಳಿತುಕೊಂಡು ಸ್ಮಾರ್ಟ್‍ಫೋನ್ ಗಳಲ್ಲಿ ಕಳೆದುಹೋಗುವ ಬದಲು ಅಥವಾ ಪಿಕ್-ಅಪ್ ಮತ್ತು ಡ್ರಾಪ್ ಗಳ ಮಧ್ಯದ ಪಯಣಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ತೂಕಡಿಸುವ ಬದಲು ಇದು ವಾಸಿಯೂ ಹೌದು.
ಕೆಲ ವರ್ಷಗಳ ಹಿಂದೆ ಚಿಕ್ಕದಾದ ವೀಡಿಯೋ ಒಂದು ನನ್ನ ಇನ್ಬಾಕ್ಸಿನಲ್ಲಿ ಬಂದು ಕೂತಿತ್ತು. ಅಲ್ಲೊಂದು ದೊಡ್ಡ ಕುರ್ಚಿ. ಅದರ ಮೇಲೆ ಏನೇನೋ ವಸ್ತುಗಳನ್ನು ಕಸದಂತೆ ಗುಡ್ಡ ಹಾಕಿದ್ದಾರೆ. ಸಿಗರೇಟು, ಮದ್ಯದ ಬಾಟಲ್ಲುಗಳು, ಮಾದಕದ್ರವ್ಯಗಳು, ಜಂಕ್ ಆಹಾರಗಳು… ಹೀಗೆ ತರಹೇವಾರಿ ವಸ್ತುಗಳ ರಾಶಿ. ಇವಿಷ್ಟರಲ್ಲಿ ಯಾವುದು ಬಹಳ ಅಪಾಯಕಾರಿ ವಸ್ತು ಎಂಬುದನ್ನು ಗುರುತಿಸಿ ಅನ್ನುವುದು ವೀಡಿಯೋ ನೋಡುತ್ತಿರುವ ವೀಕ್ಷಕನಿಗೆ ಪ್ರಶ್ನೆ.
ಈ ಪ್ರಶ್ನೆಗೆ ಉತ್ತರವಾಗಿ ಒಂದೊಂದು ವಸ್ತುಗಳು ಅಲ್ಲಿಂದ ಮಾಯವಾಗತೊಡಗುತ್ತವೆ, ತಾವು ತಂದೊಡ್ಡುವ ಅಪಾಯದ ತೀವ್ರತೆಯ ಕ್ರಮದಲ್ಲಿ. ಕೊನೆಯಲ್ಲಿ ಅಲ್ಲಿ ಉಳಿಯುವುದು ಒಂದು ಕುರ್ಚಿ ಮಾತ್ರ. ಅಲ್ಲಿದ್ದ ಅಷ್ಟೂ ವಸ್ತುಗಳಲ್ಲಿ ತನ್ನಷ್ಟು ಅಪಾಯಕಾರಿ ಇನ್ನೊಂದಿಲ್ಲ ಎಂಬಂತೆ! “ನೀವು ದಿನವಿಡೀ ಕೂತು ಕೂತು ಗೊಡ್ಡು ಮಾಂಸದ ಮುದ್ದೆಯಾಗಿಬಿಟ್ಟಿದ್ದೀರಿ. ವ್ಯಾಯಾಮ ಹಾಗಿರಲಿ. ದೇಹಕ್ಕೆ ಕನಿಷ್ಠಮಟ್ಟದ ಚಲನೆಯನ್ನೂ ನೀಡದೆ ಜಡವಾಗಿಸಿಬಿಟ್ಟಿದ್ದೀರಿ. ಖಾಯಿಲೆಗಳು ನಿಮಗೆ ಬರದೆ ಇನ್ಯಾರಿಗೆ ಬರುವುದು?” ಎಂಬ ಪ್ರಶ್ನೆಯೊಂದಿಗೆ ಕೊನೆಯಾಗುತ್ತದೆ ಆ ವೀಡಿಯೋ ಕಂಟೆಂಟ್.
ಮಹಾನಗರಗಳ ಪಾಲಾಗಿರುವ ನಮ್ಮಂತಹ ವಲಸಿಗರಿಗೆ ಥಟ್ಟನೆ ತಟ್ಟುವ ಸಂಗತಿಯಿದು. ಏಕೆಂದರೆ ಇಲ್ಲಿ ಬಹುತೇಕ ಎಲ್ಲವೂ ನಮಗೆ ಕೇವಲ ಒಂದು ಕ್ಲಿಕ್ ಮಾತ್ರದಲ್ಲಿ ಲಭ್ಯ. ಮುಕ್ಕಾಲು ಕಿಲೋಮೀಟರ್ ದೂರ ಸಾಗಲೂ ಕಾಲಬುಡಕ್ಕೆ ಕ್ಯಾಬ್ ಬಂದು ನಿಲ್ಲುತ್ತದೆ. ತರಿಸಲು ದಿನಸಿಯಿಂದ ಹಿಡಿದು ದೋಸೆಗಳವರೆಗೂ ಹೋಮ್ ಡೆಲಿವರಿ ವ್ಯವಸ್ಥೆಗಳಿವೆ. ವೈದ್ಯರ ಚಿಕಿತ್ಸೆಗೂ, ಪಾಠಕ್ಕೂ ಆನ್ಲೈನ್ ಪಡಸಾಲೆಯಿದೆ. ಮೀಟಿಂಗಿಗೂ, ಡೇಟಿಂಗಿಗೂ ಅಂತರ್ಜಾಲದ ಅಂತಃಪುರಗಳಿವೆ. ಅಗ್ಗದ ಡೇಟಾ ಸೌಲಭ್ಯದ ಬಗ್ಗೆಯಂತೂ ಹೇಳೋದೇ ಬೇಡ. ಇನ್ನು ಇಂದು ಸುದ್ದಿ ಮಾಡುತ್ತಿರುವ ಚಾಟ್ ಜಿ.ಪಿ.ಟಿ (Generative Pre-training Transformer) ತಂತ್ರಜ್ಞಾನಕ್ಕೆ ಒಂದಿಷ್ಟು ಬುದ್ಧಿ ಬಲಿತರೆ, ಅಂಕಣಕಾರನೂ ತನ್ನ ಅಕ್ಷರದಂಗಡಿಯ ಶಟರ್ ಎಳೆದು ಮೂಲೆ ಸೇರಿದರೆ ಅಚ್ಚರಿಯಿಲ್ಲ.
ಹೀಗೆ, ಮಹಾನಗರಿಗಳಲ್ಲಿ ಹೆಚ್ಚಿನವರ ಜಗತ್ತು ನಡೆಯುವುದು ಕೂತಲ್ಲೇ ಮೂಡಿ ಮರೆಯಾಗುತ್ತಿರುವ ಅಸಂಖ್ಯಾತ ಕ್ಲಿಕ್ಕುಗಳಲ್ಲಿ. ಇಲ್ಲಿ ನಡಿಗೆ ವಿರಳ. ಮಂದಿಯೊಂದಿಗೆ ನೈಜ ಒಡನಾಟಗಳು ವಿರಳಾತಿ ವಿರಳ. ದಿಲ್ಲಿಯಲ್ಲಿ ಅದೆಷ್ಟು ನಡೆದರೂ ಕೆಲ ಕಾಲ ಇಹಪರಗಳ ಚಿಂತೆಯಿರದೆ, ಸ್ಮಾರ್ಟ್‍ಫೋನುಗಳ ಕಿರಿಕಿರಿಯಿಲ್ಲದೆ ನಾನು ಹಾಯಾಗಿ ಕೈಬೀಸಿಕೊಂಡು ನಡೆಯುವುದೆಂದರೆ ನಮ್ಮೂರಿಗೆ ಹೋದಾಗಲೇ. ನಮ್ಮೂರಿನ ಸಿಟಿ ಬಸ್ಸುಗಳು ಮೈಮೇಲೆ ಏರಿಕೊಂಡು ಹೋದಂತೆ ಕೆಟ್ಟದಾಗಿ ಹೆದರಿಸುತ್ತವೆ ಅನ್ನುವುದೊಂದು ಬಿಟ್ಟರೆ, ಕಾಲ್ನಡಿಗೆಯು ಹಾಯೆನಿಸುವುದು ಅನಗತ್ಯ ಕಿರಿಕಿರಿಗಳನ್ನು ಕೊಡವಿಕೊಂಡು ನಡೆದಾಗಲೇ!
ಕೂರುವುದು, ನಡೆಯುವುದು ಕೂಡ ಒಂದು ಸಂಗತಿಯೇ ಎಂದು ಖಂಡಿತ ಕೇಳಬೇಡಿ. ಮಹಾನಗರಗಳು ನಮ್ಮನ್ನು ಇಷ್ಟಿಷ್ಟೇ ಆವರಿಸುವುದು, ಕ್ರಮೇಣ ಪೂರ್ತಿ ನುಂಗಿಹಾಕುವುದು ಇಂಥಾ ಪುಟ್ಟ ಸಂಗತಿಗಳಲ್ಲೇ!
ಪ್ರಸಾದ್ ನಾಯ್ಕ್
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ; ‘ಹಾಯ್ ಅಂಗೋಲಾ’; ಮತ್ತು ‘ಸಫಾ’ ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು. ಇವರು ಪ್ರತಿ ಹದಿನೈದು ದಿನಗಳಿಗೊಮ್ಮೆ ಶುಕ್ರವಾರದಂದು ಪೀಪಲ್ ಮೀಡಿಯಾದ ʼಮೆಟ್ರೋ ಟೈಮ್ಸ್ʼ ನಲ್ಲಿ ಮೆಟ್ರೋ ಪುರಾಣ ಬರೆಯಲಿದ್ದಾರೆ.