ಧರ್ಮಸ್ಥಳ ಸೌಜನ್ಯ ಪ್ರಕರಣದ ಜೀವಂತ ಸಾಕ್ಷಿ ಚಿಕ್ಕಕೆಂಪಮ್ಮ ಅವರ ಹೇಳಿಕೆಯನ್ನು ಬಳಸಲು ಎಸ್‌ ಐಟಿ ನಿರ್ಧಾರ

Most read

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅಪಹರಣ, ಅತ್ಯಾಚಾರ ಕೊಲೆ ಪ್ರಕರಣಕ್ಕೆಸಂಬಂಧಪಟ್ಟಂತೆ ಉಳಿದುಕೊಂಡಿರುವ ಏಕೈಕ ಸಾಕ್ಷಿ ವೈ. ಎಲ್. ಚಿಕ್ಕಕೆಂಪಮ್ಮ ನೀಡಿರುವ ಅರ್ಜಿಗೆ ಸಂಬಂಧಪಟ್ಟಂತೆ ತನಿಖೆಗೆ ಪೂರಕವಾಗಿರುವ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಎಸ್‌ ಐಟಿ ತಿಳಿಸಿದೆ. ಎಸ್‌ ಐಟಿ ಯು ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತುಹಾಕಿರುವ ಪ್ರಕರಣದ ತನಿಖೆ ನಡೆಸುತ್ತಿದೆ. ಚಿಕ್ಕಕೆಂಪಮ್ಮ ಅವರಿಗೆ 2025ರ ಸೆಪ್ಟಂಬರ್‌ 26ರಂದು ನೀಡಿರುವ ಸ್ವೀಕೃತಿ ಪತ್ರದಲ್ಲಿ “ನಿಮ್ಮ ಅರ್ಜಿಯನ್ನು ಪರಿಗಣಿಸಲಾಗಿದೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ 39/2025 ಪ್ರಕರಣದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ ಐಟಿ) ರಚಿಸಿದೆ. ಈ ಪ್ರಕರಣದ ತನಿಖೆಯನ್ನು ನಿಯಮಾನುಸಾರ ನಡೆಸಲಾಗುತ್ತಿದೆ. ಈ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ತನಿಖೆಗೆ ಪೂರಕವಾಗಿರುವ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ” ತಿಳಿಸಿದೆ.

ಧರ್ಮಸ್ಥಳ ಸಮೀಪದ ಅರಣ್ಯ ಪ್ರದೇಶದಲ್ಲಿ 2012ರ ಅಕ್ಟೋಬರ್‌ 10 ರಂದು ಧರ್ಮಸ್ಥಳದ ಪಂಗಾಳ ಗ್ರಾಮದ ನಿವಾಸಿ 17 ವರ್ಷದ ಸೌಜನ್ಯ ಅವರ ಶವ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತೋಷ್‌ ರಾವ್‌ ಎಂಬುವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು. ಆದರೆ ಸಿಬಿಐ 2023ರ ಜುಲೈ ನಲ್ಲಿ ಇವರನ್ನು ನಿರಪರಾಧಿ ಎಂದು ಘೋಷಿಸಿತ್ತು. ತನಿಖೆಯಲ್ಲಿ ನಡೆದಿರುವ ಹಲವು ಲೋಪಗಳನ್ನು ಎತ್ತಿ ತೋರಿಸಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರು. ನಂತರ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಾರ್ವಜನಿಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು.

ಕೆಲವು ಪುರುಷರು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಬಲವಂತವಾಗಿ ಹೊತ್ತೊಯ್ಯುತ್ತಿರುವುದನ್ನು ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಅವರು 2012ರ ಅಕ್ಟೋಬರ್‌  9ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಗಮನಿಸಿದ್ದರು. ವಿಡಿಯೋ ಮೂಲಕ ಎಸ್‌ ಐಟಿ ಎದುರು ಅವರು ತಮ್ಮ ಹೇಳಿಕೆಯನ್ನೂ ದಾಖಲಿಸಿದ್ದರು.

ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಸಾಮೂಹಿಕ ಶವಗಳನ್ನು ಹೂತುಹಾಕಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಚಿಕ್ಕಕೆಂಪಮ್ಮ ಅವರ ನಿರ್ಣಾಯಕ ಮಾಹಿತಿಯನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಎಸ್‌ ಐಟಿ ಸೌಜನ್ಯ ಪ್ರಕರಣದ ತನಿಖೆ ನಡೆಸುತ್ತಿಲ್ಲ ಎನ್ನುವುದು ವಿಶೇಷ. ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ ಒಪ್ಪಿಗೆ ಬೇಕಾಗಿರುತ್ತದೆ. ಸೌಜನ್ಯ ಪ್ರಕರಣದ ತನೀಖೆ ಪೂರರ್ಣಗೊಂಡಿದ್ದು, ಅಪರಾಧಿಯನ್ನು ಬಿಡುಗಡೆ ಮಾಡಲಾಗಿದೆ.

More articles

Latest article