ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಸಂತ್ರಸ್ಥೆಯನ್ನು ಕಿಡ್ನಾಪ್ ಮಾಡಿದ ಆರೋಪ ಎದುರಿಸುತ್ತಿರುವ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಇಂದು SIT ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ನಿನ್ನೆ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಿಂದಲೇ ಬಂಧಿಸಿ ಕರೆದೊಯ್ಯಲಾಗಿತ್ತು. ರಾತ್ರಿ ಇಡೀ SIT ಕಸ್ಟಡಿಯಲ್ಲಿದ್ದ ರೇವಣ್ಣ ಅವರನ್ನು ಇಂದು ನ್ಯಾಯಾಧೀಶರ ಮನೆಗೆ ಕರೆದೊಯ್ದು ಹಾಜರುಪಡಿಸಲಾಗುವುದು. ಮತ್ತಷ್ಟು ವಿಚಾರಣೆಗೆ SIT ಪೊಲೀಸ್ ಕಸ್ಟಡಿಗೆ ನ್ಯಾಯಾಲಯದ ಮುಂದೆ ವಿನಂತಿಸಿಕೊಳ್ಳುವ ಸಾಧ್ಯತೆ ಇದೆ.
ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ರೇವಣ್ಣ ಕರೆದೊಯ್ಯಲು SIT ಸಿದ್ದತೆ ನಡೆಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಒಂದುವೇಳೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರೆ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.