ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಹತ್ಯೆ ಮತ್ತಿತರ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ರಚಿಸಿರುವ ವಿಶೇಷ ತನಿಖಾ ತಂಡವು (ಎಸ್ ಐಟಿ) ಸದ್ಯದಲ್ಲೇ ಧರ್ಮಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಈ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತನಿಖೆಗೆ ಧರ್ಮಸ್ಥಳಕ್ಕೆ ತೆರಳುವಂತೆ ಎಸ್ ಐಟಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸರಿಗೂ ಸೂಚನೆ ನೀಡಲಾಗಿದೆ ಎಂದರು.
ಎಸ್ ಐಟಿಯಿಂದ ಯಾವ ಅಧಿಕಾರಿಯೂ ಹಿಂದೆ ಸರಿದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹೊರಗೆ ಉಳಿಯಲು ಬಯಸುವ ಅಧಿಕಾರಿಗಳು ನಮಗೆ ಮಾಹಿತಿ ನೀಡಿಲ್ಲ. ಒಂದು ವೇಳೆ ತಿಳಿಸಿದರೆ ಈ ಬಗ್ಗೆ ನಾವು ನಿರ್ಧರಿಸುತ್ತೇವೆ. ಎಸ್ಐಟಿ ರಚನೆಗೆ ಬಿಜೆಪಿಯವರು ಯಾಕೆ ಆಕ್ಷೇಪ ವ್ಯಕ್ತಪಡಿಸಬೇಕು? ಅವರ ವಿರೋಧ ನೋಡಿದರೆ ಅವರ ಮನಸ್ಸಿನಲ್ಲಿ ಏನೋ ಇರಬಹುದು ಎಂಬ ಸಂಶಯ ಉಂಟಾಗುತ್ತದೆ ಎಂದರು.
ನಿಗಮ ಮಂಡಳಿ ನೇಮಕ ವಿಚಾರ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ನಿಗಮ ಮಂಡಳಿಗಳಿಗೆ ನೇಮಕಕ್ಕೆ ಸದಸ್ಯರ ಪಟ್ಟಿ ಕೊಡಲು ಹನ್ನೊಂದು ಸದಸ್ಯರ ಸಮಿತಿ ರಚಿಸಲಾಗಿತ್ತು. ಪಟ್ಟಿ ನೀಡಿ ಆರು ತಿಂಗಳಾಗಿದೆ. ಯಾವ ಕಾರಣಕ್ಕೆ ವಿಳಂಬ ಆಗುತ್ತಿದೆ ಎನ್ನುವುದು ಗೊತ್ತಿಲ್ಲ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ನಮ್ಮ ಪಟ್ಟಿಯನ್ನು ಒಪ್ಪಿದ್ದಾರೆಯೇ ಎನ್ನುವುದೂ ತಿಳಿದಿಲ್ಲ. ಮುಂದಿನ ತೀರ್ಮಾನ ಅವರಿಗೇ ಬಿಟ್ಟಿದ್ದು ಎಂದರು.