ಬೆಂಗಳೂರು: ತನ್ನ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯನ್ನು ಕಿಡ್ನಾಪ್ ಮಾಡಿದ ಆರೋಪಕ್ಕೆ ಒಳಗಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಮೂರು ದಿನಗಳ ಕಾಲ SIT ಕಸ್ಟಡಿಗೆ ನೀಡಲಾಗಿದೆ.
ಇಂದು ಸಂಜೆ 7 ಗಂಟೆಯ ಸುಮಾರಿಗೆ SIT ಪೊಲೀಸರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕೋರಮಂಗಲದ NGV ಯಲ್ಲಿರುವ ನ್ಯಾ.ರವೀಂದ್ರ ಕಟ್ಟಿಮನಿ ಅವರ ನಿವಾಸಕ್ಕೆ ಕರೆದೊಯ್ದರು. ಅಲ್ಲಿ ನ್ಯಾಯಾಧೀಶರ ಮುಂದೆ ರೇವಣ್ಣ ಅವರನ್ನು ಹಾಜರುಪಡಿಸಲಾಯಿತು.
ರೇವಣ್ಣ ಬಂಧನದ ನಂತರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಸಹಕರಿಸಲಿಲ್ಲ. ಅತ್ಯಾಚಾರದ ಆರೋಪಿಯಾಗಿರುವ ಅವರ ಪುತ್ರ ದೇಶದಿಂದ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ವಿಚಾರಣೆ ನಡೆಸಲು ಐದುದಿನಗಳ ಕಸ್ಟಡಿ ನೀಡುವಂತೆ SIT ಪೊಲೀಸರು ವಿನಂತಿಸಿದರು.
ರೇವಣ್ಣ ಮೇಲಿನ ಆರೋಪಗಳು ನಿರಾಧಾರ. ಸಂತ್ರಸ್ಥೆ ಈಗಾಗಲೇ ಸಿಕ್ಕಿದ್ದಾರೆ. ಹೀಗಾಗಿ SIT ಕಸ್ಟಡಿಗೆ ಕೊಡುವ ಅಗತ್ಯವಿಲ್ಲ ಎಂದು ರೇವಣ್ಣ ಪರ ವಕೀಲರು ವಾದಿಸಿದರು.
ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಮೂರು ದಿನಗಳ ಕಾಲ ರೇವಣ್ಣ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತಿರುವುದಾಗಿ ಆದೇಶಿಸಿದರು.
ಈ ನಡುವೆ ತನ್ನನ್ನು ಕಿಡ್ನ್ಯಾಪ್ ಮಾಡಿ ಕೂಡಿಟ್ಟ ವಿಷಯವನ್ನು ಸಂತ್ರಸ್ತೆ ಪೊಲೀಸರ ಎದುರು ಹೇಳಿಕೊಂಡಿದ್ದು, ತನ್ನ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.
ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹಾಜರುಪಡಿಸಲು SIT ಸಿದ್ದತೆ ನಡೆಸಿದ್ದು ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸಲು ತಯಾರಿ ನಡೆದಿದೆ.