ಬೆಂಗಳೂರು: ಕಳೆದ 2023-24 ರಿಂದ ರಾಜ್ಯದಲ್ಲಿ 2,809 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಶದಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದು ಸಚಿವ ಎನ್ ಚೆಲುವರಾಯಸ್ವಾಮಿ ವಿಧಾನಸಭೆಗೆ ತಿಳಿಸಿದ್ದಾರೆ. ಆದರೂ ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಆತ್ಮಹತ್ಯೆಗಳಲ್ಲಿ ಇಳಿಕೆ ಕಂಡುಬಂದಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 2023-24ರಲ್ಲಿ 1,254 ರೈತರು ಮತ್ತು 2024-25ರಲ್ಲಿ 1,178 ಮತ್ತು 2025-26ರಲ್ಲಿ ಇದುವರೆಗೆ 377 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೂ ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಆತ್ಮಹತ್ಯೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.
ಹಾವೇರಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಅಂದರೆ, 297 ರೈತರು, ಎರಡನೇ ಸ್ಥಾನದಲ್ಲಿ ಬೆಳಗಾವಿ(259), ಕಲಬುರಗಿ( 234), ಧಾರವಾಡ (195) ಮತ್ತು ಮೈಸೂರಿನಲ್ಲಿ 190 ಪ್ರಕರಣಗಳು ವರದಿಯಾಗಿವೆ. 2023-24ರಲ್ಲಿ 1,081 ಅರ್ಹ ರೈತ ಕುಟುಂಬಗಳಿಗೆ 54 ಕೋಟಿ ರೂ., 2024-25ರಲ್ಲಿ 896 ಕುಟುಂಬಗಳಿಗೆ 44.8 ಕೋಟಿ ರೂ. ಮತ್ತು 2025-26ರಲ್ಲಿ (ನವೆಂಬರ್ ವರೆಗೆ) 193 ಕುಟುಂಬಗಳಿಗೆ 9.65 ಕೋಟಿ ರೂ.ಗಳನ್ನು ವಿತರಿಸಲಾಗಿದ್ದು, 112 ಪ್ರಕರಣಗಳು ಇನ್ನೂ ಪರಿಶೀಲನೆಯಲ್ಲಿವೆ ಎಂದು ಸದನದ ಗಮನಕ್ಕೆ ತಂದಿದ್ದಾರೆ.

