ಬೆಂಗಳೂರು: ರಾಜ್ಯದ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳ ಪ್ರಮುಖ ಜಲಾಶಯಗಳಲ್ಲಿ ಹೂಳು ತುಂಬಿರುವುದರಿಂದ ಸುಮಾರು 65 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಡಾ. ಅಜಯ್ ಧರಂ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಹೂಳು ತುಂಬಿರುವುದರಿಂದ ಪ್ರತಿ ವರ್ಷ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳಲ್ಲಿ 65 ಟಿಎಂಸಿ ಅಡಿ ನೀರು ವ್ಯರ್ಥವಾಗುತ್ತಿದೆ. ಈ ನೀರಿನ ಪ್ರಮಾಣವು ಬೆಂಗಳೂರಿನ ವಾರ್ಷಿಕ ನೀರಿನ ಅಗತ್ಯವಾದ 22 ಟಿಎಂಸಿ ಅಡಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದರು.
ಕೆಆರ್ ಎಸ್, ಮಲಪ್ರಭಾ, ಭದ್ರಾ, ಹಾರಂಗಿ, ಕಬಿನಿ, ಆಲಮಟ್ಟಿ, ತುಂಗಭದ್ರಾ, ಹೇಮಾವತಿ ಸೇರಿದಂತೆ 14 ಪ್ರಮುಖ ಜಲಾಶಯಗಳಿವೆ. ತುಂಗಭದ್ರಾದಲ್ಲಿ 31.6 ಟಿಎಂಸಿ ಅಡಿ ಹೂಳು, ನಾರಾಯಣಪುರದಲ್ಲಿ 10.55 ಟಿಎಂಸಿ ಅಡಿ, ಆಲಮಟ್ಟಿಯಲ್ಲಿ 7.5 ಟಿಎಂಸಿ ಅಡಿ ಮತ್ತು ಘಟಪ್ರಭಾದಲ್ಲಿ 4.9 ಟಿಎಂಸಿ ಅಡಿ ಹೂಳು ಇದೆ. ಆದರೆ ಹೂಳು ತೆಗೆಯಲು ತಮ್ಮ ಬಳಿ ಯಾವುದೇ ಕಾರ್ಯಕ್ರಮವಿಲ್ಲ. ಜಲಾಶಯಗಳಿಂದ ಹೂಳು ತೆಗೆಯಲು ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಕಾರ್ಯಕ್ರಮವೂ ಇಲ್ಲ ಎಂದು ಅವರು ವಿವರಿಸಿದರು.
ಕೃಷ್ಣ ಭಾಗ್ಯ ಜಲ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ ಮತ್ತು ಇತರ ಜಲಾಶಯಗಳ ವ್ಯಾಪ್ತಿಗೆ ಬರುವ ಜಲಾಶಯಗಳನ್ನು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರವು ಸಮೀಕ್ಷೆ ಮಾಡುತ್ತದೆ. ಕೇಂದ್ರ ಜಲ ಆಯೋಗವು ಐದು ವರ್ಷಗಳಿಗೊಮ್ಮೆ ಜಲಾಶಯಗಳಲ್ಲಿನ ಹೂಳಿನ ಸಮೀಕ್ಷೆಗೆ ಶಿಫಾರಸು ಮಾಡಿತ್ತು. ಅನೇಕ ರಾಜ್ಯ ಜಲಾಶಯಗಳಲ್ಲಿ, 2008 ರಿಂದ 2019 ರವರೆಗೆ ಸಮೀಕ್ಷೆಯನ್ನು ನಡೆಸಲಾಯಿತು.
ಹೂಳು ಸಂಗ್ರಹವಾಗಲು ಆರಂಭವಾದಾಗ ಜಲಾಶಯಗಳಲ್ಲಿ ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ನೀರು ವ್ಯರ್ಥವಾಗಿ ಹರಿಯುತ್ತದೆ. ಹೂಳು ಸಂಗ್ರಹವು ಏಕರೂಪವಾಗಿರುವುದಿಲ್ಲ ಮತ್ತು ಹೂಳನ್ನು ತೆಗೆಯುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎಂದರು.
ಹೂಳು ಸಂಗ್ರಹವು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ನೀರಾವರಿ ಕಾರ್ಯದರ್ಶಿ ಮತ್ತು ಜಲ ತಜ್ಞ ಕ್ಯಾಪ್ಟನ್ ರಾಜಾ ರಾವ್ ಅವರು ತಿಳಿಸಿದ್ದಾರೆ. ಆದರೆ ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಹೂಳು ಹೆಚ್ಚು. ಮರಗಳನ್ನು ಬೆಳೆಸುವುದರಿಂದ ಹೂಳು ಸಂಗ್ರಹವಾಗುವುದನ್ನು ನಿಯಂತ್ರಿಸಬಹುದು ಎಂದರು.
ಹೂಳು ತೆಗೆಯುವುದು ವೈಜ್ಞಾನಿಕವಾಗಿಯೂ ಅಸಾಧ್ಯ. ಹೂಳು ತೆಗೆಯುವ ಮೊದಲು ನೀರನ್ನು ಪಂಪ್ ಮಾಡಬೇಕು. ಹೂಳು ಸುರಿಯಲು ಸಾವಿರಾರು ಎಕರೆ ಭೂಮಿ ಬೇಕು. ಅಷ್ಟು ಭೂಮಿ ಲಭ್ಯವಿಲ್ಲ. ಒಡಿಶಾ ಸರ್ಕಾರವು ಹಿರಾಕುಡ್ ಜಲಾಶಯದಲ್ಲಿ ಹೂಳು ತೆಗೆಯುವ ಪ್ರಯತ್ನ ನಡೆಸಿತಾದರೂ ಆ ಯೋಜನೆ ವಿಫಲವಾಯಿತು ಎಂದು ಡಿಕೆ ಶಿವಕುಮಾರ್ ತಿಳಿಸಿದರು.

