ಶಿವಮೊಗ್ಗ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಯನ್ನು ತಿರುಚಿ, ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಸಮಾಜದಲ್ಲಿ ಅಶಾಂತಿ ಮೂಡಿಸಿ, ಶಾಂತಿಭಂಗ ಮಾಡಲು ಸಂಚು ರೂಪಿಸಿರುವ ಬಿಜೆಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಈಡಿಗರ ಸಂಘ ಮತ್ತು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ ಭಕ್ತ ಮಂಡಳಿ ಆಗ್ರಹಪಡಿಸಿದೆ.
ಈ ಸಂಬಂಧ ಎರಡೂ ಸಂಘಗಳ ಮುಖಂಡರು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.
ಈ ತಿಂಗಳ 21ರಂದು ಸಚಿವರಾದ ಮಧು ಬಂಗಾರಪ್ಪ ಅವರು ನಗರದ ಮೆಗ್ಗಾನ್ ಆಸ್ಪತ್ರೆಯ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಸಿಗಂಧೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ ಎಂದು ಹೇಳಿಕೆ ನೀಡಿದ್ದರು.ಈ ಹೇಳಿಕೆಯನ್ನು ಬಿಜೆಪಿಯ ಸಾಮಾಜಿಕ ಜಾಲತಾಣದ ಮುಖ್ಯಸ್ಥರು, ಕಾರ್ಯಕರ್ತರು ಉದ್ದೇಶಪೂರ್ವಕವಾಗಿ “ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಬೇಕೆಂದು ಒಂದು ತಿಂಗಳೊಳಗೆ ನಿಮಗೆ ಡಿಟೈಲ್ ಆಗಿ ಹೇಳುವೆ” ಎಂಬ ರೀತಿಯಲ್ಲಿ ತಿರುಚಿ 19 ಸೆಕೆಂಡ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರ ಕೆಳಗಡೆ ಅಜ್ಞಾನಿ ವಿದ್ಯಾ ಮಂತ್ರಿಗಳೇ ಸಿಗಂದೂರು ಚೌಡೇಶ್ವರಿ ಮಾತೆಯ ಮಂದಿರ ಹಾಳು ಮಾಡ್ತೀವಿ ಎಂದ ನಾಲಿಗೆಗೆ ತಾಯಿ ಬರೆ ಹಾಕುವುದು ನಿಶ್ಚಿತ, ಎಂದು ದೇವರ ಚಿತ್ರದೊಂದಿಗೆ ಬರೆದ ವಿಡಿಯೋ ವೈರಲ್ ಮಾಡಿದ್ದಾರೆ.
ಈ ರೀತಿ ಹೇಳಿಕೆಯನ್ನು ತಿರುಚಿ ಜನರಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಮಂತ್ರಿಗಳ ಬಗ್ಗೆ ದ್ವೇಷ ಭಾವನೆ ಮೂಡುವಂತೆ ಪ್ರಚೋದಿಸಿ ಸಮಾಜದಲ್ಲಿ ಅಶಾಂತಿ ಮೂಡಿಸಿ ಸಂಘರ್ಷ ಏರ್ಪಡಿಸುವ ಉದ್ದೇಶ ಹೊಂದಿರುವ ಬಿಜೆಪಿ ಕಾರ್ಯಕರ್ತರು ಸೋಶಿಯಲ್ ಮೀಡಿಯಾದ ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ.
ಈ ಹಿಂದಿನ ಸರ್ಕಾರವು ಸಿಗಂಧೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸಲು ಹುನ್ನಾರ ನೆಡೆಸಿದ್ದನ್ನು ಹಾಗೂ ಆಡಳಿತ ಮಂಡಳಿಗೆ ನೀಡಿದ್ದ ಕಿರುಕುಳ, ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸಿರುವುದನ್ನು ಖಂಡಿಸಿ “ಶ್ರೀ ಸಿಗಂಧೂರು ಕ್ಷೇತ್ರ ಹೋರಾಟ ಸಮಿತಿ ರಚಿಸಿ” ಮಧು ಬಂಗಾಪ್ಪನವರು ಹಿಂದಿನ ಸರ್ಕಾರಕ್ಕೆ ಎಚ್ಚರಿಕೆಯನ್ನು, ನೀಡಿ ಸಿಗಂಧೂರು ದೇವಸ್ಥಾನ ಬಹುಸಂಖ್ಯಾತ ಈಡಿಗ ಸಮಾಜದ ಅಸ್ಮಿತೆ, ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಸರ್ಕಾರ ಮುಜರಾಯಿಗೆ ಸೇರಿಸುವ ಹುನ್ನಾರ ಕೈಬಿಡದಿದ್ದರೆ ಜೇನು ಗೂಡಿಗೆ ಕೈ ಹಾಕಿದಂತೆ ಎಂದು ಎಚ್ಚರಿಸಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದರು.
ಅಂದಿನಿಂದ ಪ್ರತಿ ಹಂತದಲ್ಲೂ ಶ್ರೀ ಕ್ಷೇತ್ರದ ವಿಷಯವಾಗಿ ಸಲ್ಲದ ಸುಳ್ಳುಸುದ್ದಿ ಹರಡುವ ಕುತಂತ್ರ ರಾಜಕಾರಣ ಮಾಡುತ್ತಿದ್ದು, ಈ ನಕಲಿ ವೀಡಿಯೊ ಸೃಷ್ಠಿ ಇದರ ಭಾಗವಾಗಿದೆ.ಈ ರೀತಿಯ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿ ಶಾಂತಿಭಂಗವಾಗುವ ಸಾದ್ಯತೆಗಳಿರುವುದರಿಂದ, ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರ ಹೇಳಿಕೆಯನ್ನು ತಿರುಚಿರುವವರ ಮೇಲೆ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.