ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿರ್.ಆರ್. ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್ ಎಂಬಾತನನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ವಜಾಗೊಳಿಸಿದೆ. ಸುಪ್ರೀಂಕೋರ್ಟ್ ನಲ್ಲಿ ಕಲಾಪ ನಡೆಸುತ್ತಿರುವಾಗಲೇ ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತೆ ಈತನ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಹೇಳಿದೆ.
ಇಂದು ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಕೋರ್ಟ್ ರೂಂ ನಂ.1ರಲ್ಲಿ ಕಲಾಪ ನಡೆಸುತ್ತಿದ್ದಾಗ 71 ವರ್ಷದ ವಕೀಲ ರಾಕೇಶ್ ಕಿಶೋರ್ ಗೊಂದಲ ಸೃಷ್ಟಿಸಿ ತಮ್ಮ ಶೂ ತೆಗೆದು ಮುಖ್ಯ ನ್ಯಾಯಮೂರ್ತಿಗಳತ್ತ ಎಸೆಯಲು ಪ್ರಯತ್ನಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸನಾತನ ಧರ್ಮಕ್ಕೆ ಮಾಡಿರುವ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಈತ ಅರಚಿದ್ದಾನೆ. ಆಗ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆತನ ವಿರುದ್ಧ ಶಿಸ್ತಿನ ಕ್ರಮಗಳನ್ನು ಕೈಗೊಂಡಿದ್ದು, ಅನಿರ್ದಿಷ್ಟಾವಧಿಯವರೆಗೆ ವೃತ್ತಿಯಿಂದ ಅಮಾನತ್ತು ಮಾಡಿದೆ.
ಯುನೆಸ್ಕೋ ವಿಶ್ವ ಪರಂಪರೆಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶದ ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ನಿರ್ಮಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು.
ಈ ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ (ಎಎಸ್ ಐ) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಎಎಸ್‌ಐ ಅನುಮತಿ ಪಡೆದುಕೊಳ್ಳಿ ಎಂದು ಹೇಳಿತ್ತು.
ಸಿಜೆಐ ಗವಾಯಿ ಅವರು, ಪ್ರಚಾರ ಹಿತಾಸಕ್ತಿಗಾಗಿ ಈ ಅರ್ಜಿಯನ್ನು ನೀವು ಸಲ್ಲಿಸಿದ್ದೀರಿ. ದೇವರಲ್ಲೇ ಏನಾದರೂ ಮಾಡುವಂತೆ ಬೇಡಿಕೊಳ್ಳಿ ಎಂದು ಹೇಳಿದ್ದರು. ಅವರ ಈ ಹೇಳಿಕೆ ತೀವ್ರ ಟೇಕೆಗಳಿಗೆ ಗುರಿಯಾಗಿತ್ತು.ನಂತರ ಗವಾಯಿ ಅವರು ನನ್ನ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು.