ಬೆಂಗಳೂರು: ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾಗಿರುವ ಬಿ.ಎಸ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮುಖ್ಯನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮನುವಾದಿಗಳ ಮನಸ್ಸು ಹೇಗಿರುತ್ತದೆ ಎಂದು ವಿಶ್ಲೇಷಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಎಸ್.ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು. ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭಧ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ.
ಗೌರವಾನ್ವಿತ ಮುಖ್ಯನ್ಯಾಯಮೂರ್ತಿಗಳಾದ ಬಿ.ಎಸ್.ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕೆ ಇವೆ ಎನ್ನುವುದನ್ನು ಅವರ ಗಮನಕ್ಕೆ ತರಬಯಸುತ್ತೇನೆ. ಮುಖ್ಯನ್ಯಾಯಮೂರ್ತಿಗಳು ಯಾವುದೇ ಪಕ್ಷ ಇಲ್ಲವೇ ಧರ್ಮಕ್ಕೆ ಸೇರಿದವರಲ್ಲ. ಈ ದೃಷ್ಟಿಯಿಂದ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಸುಪ್ರೀಂ ಕೋರ್ಟ್ ನಲ್ಲಿ ಇಂದು ನಡೆದಿರುವ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕೆಂದು ಮನವಿ ಮಾಡುತ್ತೇನೆ.
ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದುಹಾಕಿ, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ಕಾರಣಕ್ಕಾಗಿಯೇ ರಾಕೇಶ್ ಕಿಶೋರ್ ನಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎನ್ನುವುದನ್ನು ನಾವು ಮರೆಯಬಾರದು. ನಾಥೂರಾಮ್ ಗೋಡ್ಸೆಯಂತಹ ಒಬ್ಬ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಮೆರೆಸಲು ಹೊರಟಿರುವ ರೀತಿಯಲ್ಲಿಯೇ ಕೆಲವು ಪುಂಡರು ವಕೀಲನ ಕುಕೃತ್ಯವನ್ನು ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ನಾನು ತಿಳಿದುಕೊಂಡಿದ್ದೇನೆಎಂದಿದ್ದಾರೆ.