ತಮಿಳುನಾಡು ಜನರಲ್ಲಿ ಅಂಗಲಾಚಿ ಕ್ಷಮೆ ಕೇಳಿದ ಶೋಭಾ ಕರಂದ್ಲಾಜೆ

Most read

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟವನ್ನು ಮಾಡಿದವರು ತಮಿಳರು ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮಿಳು ಜನತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ನನ್ನೆಲ್ಲ ತಮಿಳು ಸೋದರರೇ ಮತ್ತು ಸೋದರಿಯರೇ, ನನ್ನ ಮಾತುಗಳು ವಿಷಯವನ್ನು ಸ್ಪಷ್ಟಗೊಳಿಸುವ ಉದ್ದೇಶವನ್ನು ಹೊಂದಿದ್ದವೇ ಹೊರತು ಮಬ್ಬುಗೊಳಿಸುವುದಾಗಿರಲಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೂ ನನ್ನ ಟೀಕೆಗಳು ಕೆಲವರಿಗೆ ನೋವು ತಂದಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆಗಳು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರಿಗೆ ಮಾತ್ರ ಅನ್ವಯಿಸುತ್ತದೆ. ತಮಿಳುನಾಡಿನ ಯಾರಿಗೇ ಆದರೂ ನೋವಾಗಿದ್ದರೆ ನನ್ನ ಹೃದಯದ ಆಳದಿಂದ, ನಾನು ನಿಮ್ಮ ಕ್ಷಮೆಯನ್ನು ಕೇಳುತ್ತೇನೆ. ಇದಲ್ಲದೆ, ನಾನು ನನ್ನ ಹಿಂದಿನ ಅಭಿಪ್ರಾಯವನ್ನು ಹಿಂತೆಗೆದುಕೊಳ್ಳುತ್ತೇನೆ ಎಂದು ಶೋಭಾ ಕರಂದ್ಲಾಜೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಕುರಿತಾಗಿ ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆ ತಮಿಳುನಾಡಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಿಧ ರಾಜಕೀಯ ಪಕ್ಷಗಳು ಶೋಭಾ ಹೇಳಿಕೆ ವಿರುದ್ಧ ತೀವ್ರ ಟೀಕೆ ಮಾಡಿದ್ದವು. ಇದಲ್ಲದೆ ತಮಿಳುನಾಡು ಬಿಜೆಪಿ ಘಟಕ ಮತ್ತು ಅದರ ಮೈತ್ರಿಪಕ್ಷ ಎಐಡಿಎಂಕೆ ಕೂಡ ಶೋಭಾ ಹೇಳಿಕೆ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದವು.

ರಾಮೇಶ್ವರಂ ಕೆಫೆ ಪ್ರಕರಣದ ಬಾಂಬರ್‌ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದಿದ್ದ. ಈ ಕಾರಣದಿಂದ ನಾನು ಹೇಳಿಕೆ ನೀಡಿದ್ದೆ. ತಮಿಳು ಜನರು ಕರ್ನಾಟಕದೊಂದಿಗೆ ಉತ್ತಮ ಸಂಬಂಧದ ಇತಿಹಾಸ ಹೊಂದಿದ್ದಾರೆ. ತಮಿಳರು ಕರ್ನಾಟಕದ ಸಾಮಾಜಿಕ ತಳಹದಿಯ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಕರ್ನಾಟಕದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ತಮಿಳರೊಂದಿಗೆ ನಾವು ಐತಿಹಾಸಿಕವಾಗಿ ಅತ್ಯುತ್ತಮ ಸಂಬಂಧ ಹೊಂದಿದ್ದೇವೆ ಎಂದು ಶೋಭಾ ಹೇಳಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟ ನಡೆಸಿದ್ದು ತಮಿಳರು ಎಂದು ಶೋಭಾ ಕರಂದ್ಲಾಜೆ ಹೇಳುತ್ತಿದ್ದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಇಂಥ ಹೇಳಿಕೆಯನ್ನು ಒಂದೇ NIA ಅಧಿಕಾರಿಗಳು ಹೇಳಬೇಕು ಅಥವಾ ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಭಾಗಿಯಾದವರೇ ಹೇಳಬೇಕು ಎಂದು ತಿರುಗೇಟು ನೀಡಿದ್ದರು. ಶೋಭಾ ಕರಂದ್ಲಾಜೆಗೆ ಇಂಥ ಹೇಳಿಕೆ ನೀಡುವ ಯಾವ ಅಧಿಕಾರವೂ ಇಲ್ಲ ಎಂದು ಅವರು ಹೇಳಿದ್ದರು.

ಚುನಾವಣಾ ಆಯೋಗ ಕೂಡಲೇ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಜೆಪಿಯ ವಿಭಜಕ ನೀತಿಯನ್ನು ಕನ್ನಡಿಗರು, ತಮಿಳರು ಧಿಕ್ಕರಿಸುತ್ತಾರೆ. ಸಮಾಜದ ಶಾಂತಿ ನೆಮ್ಮದಿ ಮತ್ತು ದೇಶದ ಏಕತೆಗೆ ಧಕ್ಕೆ ತರುತ್ತಿರುವ ಶೋಭಾ ಕರಂದ್ಲಾಜೆ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಟಾಲಿನ ಆಗ್ರಹಿಸಿದ್ದರು.

ರಾಮೇಶ್ವರಂ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ NIA ಬಳ್ಳಾರಿ ಮೂಲದ ಶಬ್ಬೀರ್‌ ಎಂಬಾತನನ್ನು ವಶಕ್ಕೆ ಪಡೆದಿದೆಯಾದರೂ ಈತನಾಗಲೀ, ಈತನ ಸಹಚರರಾಗಲೀ ತಮಿಳುನಾಡಿನ ಕೃಷ್ಣಗಿರಿಯ ಅರಣ್ಯವೊಂದರಲ್ಲಿ ತರಬೇತಿ ಪಡೆದಿದ್ದರು ಎಂದು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಿದ್ದಾಗ್ಯೂ ಶೋಭಾ ಕರಂದ್ಲಾಜೆಗೆ ಈ ಮಾಹಿತಿ ಕೊಟ್ಟವರು ಯಾರು ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಈ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ವಿರುದ್ಧ ಗಂಭೀರ ಆರೋಪ ಎಸಗಿರುವ ಶೋಭ ಕರಂದ್ಲಾಜೆ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಭಯೋತ್ಪಾದಕರಿಗೆ ಸ್ಟಾಲಿನ್‌ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸ್ಟಾಲಿನ್‌ ಅವರೇ, ನಿಮ್ಮ ಆಡಳಲಿತದಲ್ಲಿ ತಮಿಳುನಾಡು ಯಾವ ರೂಪ ಪಡೆದುಕೊಂಡಿದೆ ನೋಡಿ. ನಿಮ್ಮ ತುಷ್ಟೀಕರಣ ರಾಜಕಾರಣದಿಂದ ಭಯೋತ್ಪಾದಕ ಶಕ್ತಿಗಳಿಗೆ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಹಗಲು ರಾತ್ರಿ ದಾಳಿ ನಡೆಸಲು ಧೈರ್ಯ ಬಂದಿದೆ ಎಂದು ಶೋಭಾ ಹೇಳಿದ್ದಾರೆ.

More articles

Latest article