ಮುಂಬೈ: ಮಹಾ ವಿಕಾಸ್ ಆಘಾಡಿಯ (ಎಂವಿಎ) ಶಾಸಕರು ಹಾಗೂ ಸಂಸದರನ್ನು ಹನಿಟ್ರ್ಯಾಪ್ ಗೆ ಸಿಲುಕಿಸಿದ್ದರಿಂದಲೇ 2022 ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪತನಗೊಂಡಿತು ಎಂದು ಶಿವಸೇನೆ (ಯುಬಿಟಿ) ಗಂಭೀರ ಆರೋಪ ಮಾಡಿದೆ.
ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಈ ಸಂಬಂಧ ಬರೆಯಲಾಗಿದೆ.
ಶಾಸಕರು ಮತ್ತು ಸಂಸದರನ್ನು ಹನಿಟ್ರ್ಯಾಪ್ ಗೆ ಕೆಡವಲೆಂದೇ ರಹಸ್ಯ ಕ್ಯಾಮೆರಾಗಳು ಹಾಗೂ ಪೆಗಾಸಸ್ ತರಹದ ಕಣ್ಗಾವಲು ವ್ಯವಸ್ಥೆಯನ್ನು ಬಳಸಲಾಗಿದೆ. ಅವಿಭಜಿತ ಶಿವಸೇನೆ ಮತ್ತು ಎನ್ ಸಿ ಪಿಯ ಕೆಲವು ಶಾಸಕರು ಕೇಂದ್ರದ ಇಡಿ, ಸಿಬಿಐ ಐಟಿ ಯಂತಹ ತನಿಖಾ ಸಂಸ್ಥೆಗಳ ಒತ್ತಡದಿಂದ ತಮ್ಮ ನಿಷ್ಠೆಯನ್ನು ಬದಲಿಸಿದರು. ಕನಿಷ್ಠ 18 ಶಾಸಕರು ಹಾಗೂ ನಾಲ್ವರು ಸಂಸದರು ಹನಿಟ್ರ್ಯಾಪ್ ಗೆ ಸಿಲುಕಿದ್ದು, ಈ ಗಂಡಾಂತರದಿಂದ ಪಾರಾಗಲಿಕ್ಕಾಗಿಯೇ ಬಿಜೆಪಿ ಜೊತೆ ಕೈ ಜೋಡಿಸಿದರು ಎಂದು ಆಪಾದಿಸಲಾಗಿದೆ.
ಸಂಸದರು ಹಾಗೂ ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂಬ ವಿಧಾನಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದೂ ಹೇಳಿದೆ. ಹನಿಟ್ರ್ಯಾಪ್ ಜಾಲವನ್ನು ಹೊಂದಿರುವ ಬಿಜೆಪಿಯು, ಶಿವಸೇನೆಯ ಸಂಸದರು, ಶಾಸಕರಿದ್ದ ‘ಪೆನ್ ಡ್ರೈವ್’ ಒಂದನ್ನು ಏಕನಾಥ ಶಿಂದೆ ಅವರಿಗೆ ನೀಡಿದ್ದರು. ನಂತರ ಅವರು ಕೂಡಲೇ ಅವರು ಗೋವಾ, ಸೂರತ್, ಗುವಾಹಟಿಗೆ ಪ್ರಯಾಣಿಸಿದರು. ಈ ಎಲ್ಲ ಬೆಳವಣಿಗೆಗಳು ರೋಮಾಂಚನ ಕಥಾನಕದಂತಿವೆ ಎಂದು ಪತ್ರಿಕೆಯಲ್ಲಿ ವಿವರಿಸಲಾಗಿದೆ.
ಏಕನಾಥ ಶಿಂದೆ ಅವರಿಗೆ ಶಾಸಕರ ಬೆಂಬಲ ಇರಲಿಲ್ಲ. ಪೊಲೀಸರು ಹಾಗೂ ಆಗ ಪ್ರತಿಪಕ್ಷದ ನಾಯಕರಾಗಿದ್ದ ದೇವೇಂದ್ರ ಫಡಣವೀಸ್ ಅವರ ಬ್ಲ್ಯಾಕ್ ಮೇಲ್‌ನಿಂದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಶಿವಸೇನೆಯ ಸಚಿವರಾದ ಸಂಜಯ್ ಶಿರ್ಸಾಟ್, ಯೋಗೇಶ್ ಕದಂ, ದಾದಾ ಭೂಸೆ ಹಾಗೂ ಎನ್ ಸಿ ಪಿಯ ಮಾಣಿಕ್ ಕೊಕಟೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ. ಕೆಲವು ಸಚಿವರು ಹನಿಟ್ರ್ಯಾಪ್ ಗೆ ಸಿಲುಕಿದ್ದು, ಅವರೂ ಸಹ ಸಂಪುಟದಿಂದ ಹೊರಹೋಗಬೇಕಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.