ಶಿವಮೊಗ್ಗ:ಜಿಲ್ಲೆಯ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಕೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ. ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್ ಫೋನ್ ಅನ್ನು ಹೊರತೆಗೆದಿದ್ದಾರೆ.
ಕೈದಿ ದೌಲತ್ ಖಾನ್ ಅಲಿಯಾಸ್ ಗುಂಡಾ (30) ಎಂಬ ಕೈದಿಯ ಹೊಟ್ಟೆಯಲ್ಲಿ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್ ಫೋನ್ ಪತ್ತೆಯಾಗಿದೆ.
ಶಿವಮೊಗ್ಗದ ನ್ಯಾಯಾಲಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೌಲತ್ ಖಾನ್ ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈತ ಕಳೆದ ಜೂನ್ 24ರಂದು ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ವೈದ್ಯರು ಔಷಧಿ ಕೊಟ್ಟಿದ್ದರು. ಹೊಟ್ಟೆನೋವು ಹೆಚ್ಚಾದಾಗ ಮತ್ತೆ ಆಸ್ಪತ್ರೆಗೆ ಬಂದಿದ್ದ. ಆಗ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.
ಆ ಆಸ್ಪತ್ರೆಯ ವೈದ್ಯರು ಎಕ್ಸ್ ರೇ ಮಾಡಿದಾಗ ದೌಲತ್ ನ ಹೊಟ್ಟೆಯಲ್ಲಿ ಯಾವುಓ ಒಂದು ವಸ್ತು ಇದೆ ಎನ್ನುವುದು ತಿಳಿದು ಬಂದಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಆತನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ.
ಜೈಲಿನೊಳಗೆ ಮೊಬೈಲ್ ತರುವುದು ನಿಷೇಧವಿದ್ದರೂ ಆತನ ಬಳಿಗೆ ಮೊಬೈಲ್ ಹೇಗೆ ಬಂದಿತು ಎನ್ನುವುದನ್ನು ತಿಳಿಯಲು ನಿಖೆಗೆ ಆದೇಶಿಸಲಾಗಿದೆ. ಎರಡು ವರ್ಷಗಳ ಹಿಂದೆಯೂ ಹೊಟ್ಟೆ ನೋವು ಎಂದು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದ ಕೇಂದ್ರ ಕಾರಾಗೃಹದ ಕೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು.