ಭೀಮಾನದಿ ಪಾತ್ರದ ರೈತರ ಉಳಿವಿಗಾಗಿ ಉಜಿನಿ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ಮಾರ್ಚ್ 15 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಹೋರಾಟಗಾರ ಶಿವಕುಮಾರ ನಾಟೀಕಾರ ಅವರ ಆರೋಗ್ಯ ಸ್ಥಿತಿ ಕಳೆದ ಶುಕ್ರವಾರ ಬಿಗಡಾಯಿಸಿತ್ತು. ಚಳವಳಿಯ ತಂಡ ತಕ್ಷಣ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ನಾಟಿಕಾರ ಅವರು ಶುಕ್ರವಾರದಿಂದ ಮತ್ತೆ ನಿರಶನ ಮುಂದುವರಿಸಿದ್ದಾರೆ.
ವಿಜಯಪುರ ಜಿಲ್ಲಾ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ದೂರವಾಣಿ ಕರೆ ಮಾಡಿ, ಮಹಾರಾಷ್ಟ್ರಕ್ಕೆ ಪತ್ರ ಬರೆದಿರುವ ಮುಖ್ಯಮಂತ್ರಿಗಳು ಭೀಮಾನದಿಗೆ ನೀರು ಹರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸರಕಾರ ನಿಮ್ಮ ಹೋರಾಟದ ಜೊತೆಯಿದ್ದು ಭೀಮಾನದಿಗೆ ನೀರು ಹರಿಸಲು ಸತತ ಪ್ರಯತ್ನ ಮಾಡಲಾಗುವುದು. ಹೀಗಾಗಿ ತಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ನಿರಶನ ಕೈಬಿಡುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ನಾಟೀಕಾರ ಅವರು, ಭೀಮಾನದಿಗೆ ನೀರು ಹರಿಯುವವರೆಗೆ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎನ್ನುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಲೋಕಸಭಾ ಸದಸ್ಯ ಉಮೇಶ ಯಾದವ್, ಅಫಸಲಪುರ ಶಾಸಕ ಎಂ.ವೈ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗುಳಿ, ಮಾಜಿ ಶಾಸಕರುಗಳಾದ ಮಾಲಿಕಯ್ಯ ಗುತ್ತೇದಾರ, ರಮೇಶ ಭೂಸನೂರ ದೊಡ್ಡಗೌಡ ಪಾಟೀಲ ಸೇರಿದಂತೆ ಪಕ್ಷ ಭೇದವಿಲ್ಲದೆ ಎಲ್ಲ ನಾಯಕರು ಬಂದು ನಾಟೀಕರ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಜೀವನದಿ ಭೀಮೆ
ಕೃಷ್ಣಾ ನದಿಯ ಉಪನದಿಯಾಗಿರುವ ಭೀಮಾನದಿ ತನ್ನ 786 ಕಿ.ಮೀ. ಗಳ ಒಟ್ಟು ಒಳಹರಿವಿನಲ್ಲಿ ಸುಮಾರು 289 ಕಿ.ಮೀ. ಉದ್ದ ಕರ್ನಾಟಕದಲ್ಲೇ ಹರಿದಿದೆ. ಕರ್ನಾಟಕದ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯ ತನ್ನ ಎರಡೂ ದಡದಲ್ಲಿ 164 ಹಳ್ಳಿಗಳ ಲಕ್ಷಾಂತರ ಜನ ಜಾನುವಾರುಗಳಿಗೆ ಜೀವಜಲವನ್ನು ಉಣಬಡಿಸುತ್ತದೆ. ಈ ಭಾಗದ ಜನ ಕೃಷಿಗೆ ಸಂಪೂರ್ಣವಾಗಿ ಭೀಮಾನದಿಯನ್ನೇ ಅವಲಂಬಿಸಿದ್ದಾರೆ. ನದಿಪಾತ್ರದ ಹಲವು ಹಳ್ಳಿ, ಪಟ್ಟಣಗಳು ಕುಡಿಯುವ ನೀರಿಗೆ ನದಿಯನ್ನೇ ನಂಬಿದ್ದಾರೆ.
ಕೃಷ್ಣಾ ನದಿ ನೀರಿನ ಹಂಚಿಕೆಗೆ 1976ರಲ್ಲಿ ನ್ಯಾಯಮೂರ್ತಿ ಬಚಾವತ್ ಅವರ ನೇತೃತ್ವದಲ್ಲಿ ರಚಿಸಿದ ಆಯೋಗದ ವರದಿಯಂತೆ ಕರ್ನಾಟಕದ ಈ ಭಾಗಕ್ಕೆ ಪ್ರತಿ ವರ್ಷ 15 ಟಿಎಂಸಿ ನೀರು ಹರಿಯಬೇಕು. ವರದಿ ಅನುಷ್ಠಾನಕ್ಕೆ ಬಂದಾಗಿನಿಂದಲೂ ಕರ್ನಾಟಕಕ್ಕೆ ನೀರಿನ ಪ್ರಮಾಣದಲ್ಲಿ ಅನ್ಯಾಯವಾಗುತ್ತಲೇ ಬರುತ್ತಿದೆ. ಆಯೋಗದ ವರದಿ ಅನುಷ್ಠಾನಕ್ಕೆ ಬಂದ 1976ರಿಂದ 1985 ರವರೆಗೆ ಮಹಾರಾಷ್ಟ್ರ ಸರ್ಕಾರ ಪ್ರತಿವರ್ಷ 9.30 ಟಿಎಂಸಿ ನೀರನ್ನು ರಾಜ್ಯಕ್ಕೆ ಹರಿಸಿತು. ನಂತರ ನೀರು ಹರಿಸುವಿಕೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ 1986-98ರವರೆಗೆ ಕೇವಲ 1.70 ಟಿಎಂಸಿ ಮಾತ್ರ ರಾಜ್ಯಕ್ಕೆ ಹರಿಸಿತು. ಆನಂತರದಲ್ಲಿ ಈ ಪ್ರಮಾಣದ ನೀರನ್ನು ಸಹ ಹರಿಸುವುದನ್ನೂ ಅಲ್ಲಿನ ಸರ್ಕಾರ ನಿಲ್ಲಿಸಿತು. ಆ ಭಾಗದಲ್ಲಿ ಮಳೆ ಹೆಚ್ಚಾದಾಗ ಮಾತ್ರ ಹೆಚ್ಚಿನ ನೀರು ಹರಿಸುವ ಅಲ್ಲಿನ ಸರ್ಕಾರ ಆಯೋಗದಿಂದ ಅನುಷ್ಠಾನಗೊಂಡ ವರದಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ.
1998ರ ನಂತರ ಬಚಾವತ್ ತೀರ್ಪಿನಂತೆ ಕರ್ನಾಟಕದ 15 ಟಿಎಂಸಿ ನೀರಿನ ಹಕ್ಕಿಗಾಗಿ ಭೀಮಾನದಿ ಹೋರಾಟ ಸಮಿತಿಯ ಪಂಚಪ್ಪ ಕಲಬುರಗಿ ಅವರು ನಮ್ಮ ಪಾಲಿನ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಅವರ ಅರ್ಜಿಯ ವಿಚಾರಣೆಯನ್ನು ಕೈಗೊಂಡು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನದಿಯಲ್ಲಿ ಯಾವಾಗಲೂ ಒಳಹರಿವು ಇರುವಂತೆ ನೋಡಿಕೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ನೀಡಿತು.
ಬಚಾವತ್ ಆಯೋಗ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕದ ಪಾಲಿನ ನೀರನ್ನು ಹರಿಸಲು ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುವುದು ಸದ್ಯ ನಿರಶನ ಚಳವಳಿ ಹಮ್ಮಿಕೊಂಡಿರುವ ಶಿವಕುಮಾರ ನಾಟಿಕಾರ ಅವರ ಆಗ್ರಹವಾಗಿದೆ.
ಪ್ರಮುಖ ಬೇಡಿಕೆಗಳು
- ಭೀಮಾನದಿಗೆ ಉಜಿನಿ ಜಲಾಶಯದಿಂದ ತಕ್ಷಣ 5 ಟಿಎಂಸಿ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು.
- ಕರ್ನಾಟಕ ಸರಕಾರವು ಸಚಿವರ, ಉನ್ನತ ಮಟ್ಟದ ಅಧಿಕಾರಿಗಳ ನಿಯೋಗ ರಚಿಸಿ ಮಹಾರಾಷ್ಟ್ರಕ್ಕೆ ಕಳುಹಿಸುವ ಮೂಲಕ ಉಜಿನಿ ಜಲಾಶಯದಲ್ಲಿ ಲಭ್ಯವಿರುವ ಲೈವ್ ಸ್ಟೋರೇಜ್ ಮತ್ತು ಡೆಡ್ ಸ್ಟೋರೇಜ್ ನೀರಿನ ಪ್ರಮಾಣವನ್ನು ತಿಳಿದುಕೊಳ್ಳಬೇಕು. ಮತ್ತು ನೀರು ಹರಿಸುವಂತೆ ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸಬೇಕು.
- ಭೀಮಾನದಿ ತೀರದ ಹಳ್ಳಿ, ಪಟ್ಟಣದ ಜನರಿಗೆ ಕುಡಿಯುವ ನೀರಿನ ಅತ್ಯವಶ್ಯಕತೆ ಇರುವುದರಿಂದ, ತಾತ್ಕಾಲಿಕವಾಗಿ ನಾರಾಯಣಪುರ ಅಥವಾ ಆಲಮಟ್ಟಿ ಜಲಾಶಯದಿಂದ ನೀರು ಹರಿಸಬೇಕು.
ನಾಟೀಕಾರ ಹೋರಾಟಕ್ಕೆ ಪಕ್ಷಾತೀತ ಬೆಂಬಲ
ಭೀಮಾನದಿಪಾತ್ರದ ರೈತರ ಸಂಕಷ್ಟಕ್ಕೆ ದನಿಯಾಗಿ ಹೋರಾಟ ಕೈಗೆತ್ತಿಕೊಂಡಿರುವ ಶಿವಕುಮಾರ ನಾಟೀಕಾರ ಅವರ ಹೋರಾಟಕ್ಕೆ ಜನ ಪಕ್ಷಾತೀತವಾಗಿ ಬೆಂಬಲಿಸುತ್ತಿದ್ದಾರೆ. ಕಳೆದ ಬುಧವಾರ ತಮ್ಮ ಅಫಸಲಪುರ ಪಟ್ಟಣದ ಉದ್ದಿಮೆದಾರರು, ಅಂಗಡಿಕಾರರು, ವ್ಯಾಪಾರಸ್ಥರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ವಿವಿಧ ಸಂಘಟನೆಗಳು, ಜನಪರ ಸಂಘಟನೆಗಳು ಮತ್ತು ನಾನಾ ಪಕ್ಷಗಳ ನಾಯಕರೊಂದಿಗೆ ನಾಟೀಕಾರ ಅವರು ಸತ್ಯಾಗ್ರಹ ಮಾಡುತ್ತಿರುವ ಸ್ಥಳಕ್ಕೆ ಹೋಗಿ ಹೋರಾಟವನ್ನು ಬೆಂಬಲಿಸಿದರು. ಇದರಿಂದ ಅಫಸಲಪುರ ಪಟ್ಟಣ ಅಂದು ಸುಮಾರು 6-7 ತಾಸು ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಹೋರಾಟವನ್ನು ಬೆಂಬಲಿಸಿ ಹಲವಾರು ಸ್ವಾಮೀಜಿಗಳು ರಸ್ತೆಯಲ್ಲೇ ಕುಳಿತು ಹೋರಾಟ ಮಾಡಿದ್ದು ವಿಶೇಷವಾಗಿತ್ತು. ಇದರಿಂದ ಕಲಬುರಗಿ-ವಿಜಯಪುರ ರಸ್ತೆ ಸಂಪೂರ್ಣ ಬಂದ್ ಆಗಿ ಸಂಚಾರ ದಟ್ಟಣೆ ಉಂಟಾಗಿತ್ತು.
ಸತತ ಉಪವಾಸದಿಂದ ನಾಟೀಕಾರ ಅವರು ಆರೋಗ್ಯ ಹದಗೆಟ್ಟು ಪ್ರಜ್ಞಾಹೀನ ಸ್ಥಿತಿಗೆ ತಲುಪಿ ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಆ ಭಾಗದ ಜನತೆ ಪ್ರತಿನಿತ್ಯ ಅವರಿಗಾಗಿ ಪ್ರಾರ್ಥಿಸಿದ್ದಾರೆ. ದೇವಸ್ಥಾನಗಳಲ್ಲಿ ದೀಪ ಹಚ್ಚಿದ್ದಾರೆ. ದೀರ್ಘದಂಡ ನಮಸ್ಕಾರ, ಹರಕೆ ಕಟ್ಟಿ ಬೇಡಿಕೊಂಡಿದ್ದೂ ಇದೆ. ಜನರ ಜೀವನಾಡಿಯ ಹರಿವಿಗಾಗಿ ತಮ್ಮ ಜೀವವನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿರುವ ಶಿವಕುಮಾರ ನಾಟಿಕಾರ ಅವರ ಆರೋಗ್ಯ ಚೇತರಿಕೆಗಾಗಿ ಜನ ಅವರವರ ಭಾವಕ್ಕೆ ತಕ್ಕಂತೆ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ.