ಶಿಗ್ಗಾವಿ ಸವಣೂರು ಕ್ಷೇತ್ರ ನನ್ನ ತವರು ಮನೆ: ಬಸವರಾಜ ಬೊಮ್ಮಾಯಿ

Most read

ಹಾವೇರಿ (ಶಿಗ್ಗಾವಿ): ಶಿಗ್ಗಾವಿ ಸವಣೂರು ಕ್ಷೇತ್ರ ನನ್ನ ತವರು ಮನೆ, ನನಗೆ ರಾಜಕೀಯವಾಗಿ ಎರಡನೇ ಜನ್ಮ ನೀಡಿದ ಕ್ಷೇತ್ರ ಇದು. ನನ್ನ ಜೀವನದ ಕೊನೆವರೆಗೂ ಈ ಕ್ಷೇತ್ರ ಮರೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.


ಶಿಗ್ಗಾವಿ ಸವಣೂರು ಕ್ಷೇತ್ರದ ಶೀಲವಂತ ಸೋಮಾಪುರ, ದುಂಢಸಿ, ಅ.ಮ.ಕೊಪ್ಪ, ಅರಟಾಳ ತಾಂಡಾ, ಹೊಸೂರು ಯತ್ನಳ್ಳಿ, ತಾಂಡಾ, ಜಕ್ಕನಕಟ್ಟಿ ಗ್ರಾಮಗಳಲ್ಲಿ ಜನರಿಗೆ ಏರ್ಪಡಿಸಿರುವ ಧನ್ಯವಾದ ಯಾತ್ರೆಯಲ್ಲಿ ಇಂದು ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ವಿಭಿನ್ನವಾದ ವಿಶೇಷವಾದ ಯಾತ್ರೆಯಾಗಿದೆ. ಕಳೆದ ವರ್ಷವೇ ನನ್ನನ್ನು ಅಭೂತಪೂರ್ವ ಬೆಂಬಲದೊಂದಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಿರಿ, ಈಗ ನಾನು ಮಾಜಿ ಶಾಸಕನಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನೀವು ನನ್ನನ್ನು ಐದು ವರ್ಷಕ್ಕೆ ಆಯ್ಕೆ ಮಾಡಿದ್ದಿರಿ, ನಾನು ಇಂತಹ ಪರಿಸ್ಥಿತಿಯಲ್ಲಿ ಬಂದು ನಿಮ್ಮ ಮುಂದೆ ನಿಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ.

ಕಳೆದ ಎರಡು ಮೂರು ತಿಂಗಳಲ್ಲಿ ಆಗಿರುವ ಬೆಳವಣಿಗೆಯಿಂದ ನಾನು ಭಾರತದ ಉನ್ನತ ಸಂಸತ್ತಿನ ಸದಸ್ಯನಾಗಿ ಪಾಲ್ಗೊಳ್ಳುವ ಅವಕಾಶ ದೊರೆತಿದೆ. ಸುಮಾರು ಇಪ್ಪತೈದು ವರ್ಷ ನಾನು ಕರ್ನಾಟಕ ವಿಧಾನ ಮಂಡಳದ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನಾಲ್ಕು ಬಾರಿ ಶಾಸಕನಾಗಿ ನೀವು ನನ್ನನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ಆಶೀರ್ವಾದದಲ್ಲಿ ಬಹಳ ದೊಡ್ಡ ಶಕ್ತಿ ಇದೆ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ನೀವು ಒಂದು ಸಾರಿ ಬಟನ್ ಒತ್ತಿದರೆ ನಾನು ಕೇವಲ ಶಾಸಕನಲ್ಲಾ ಮಂತ್ರಿಯಾಗಿ ಬರುತ್ತಿದ್ದೆ. ಅಂತಹ ಶಕ್ತಿ ಶಿಗ್ಗಾವಿ ಸವಣೂರು ಕ್ಷೇತ್ರದ ಜನತೆಗಿದೆ. ಈ ಶಕ್ತಿ ಬೇರೆ ಕ್ಷೇತ್ರದ ಜನತೆಗೆ ಇಲ್ಲ ಎಂದು ಹೇಳಿದರು.

ಶಿಗ್ಗಾವಿ ಕ್ಷೇತ್ರ ಆಯ್ಕೆ ಮಾಡಿದ್ದು ನನ್ನ ಸೌಭಾಗ್ಯ


ನಾನು ಬಿಜೆಪಿ ಸೇರಿದಾಗ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬ ಪ್ರಶ್ನೆ ಬಂದಾಗ ನಾನು ಧಾರವಾಡ ಅಥವಾ ಕುಂದಗೋಳ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದೆ. ಆದರೆ, ಬಿಜೆಪಿ ವರಿಷ್ಠರು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದರು. ನಾನು ಐದು ನಿಮಿಷ ಯೋಚನೆ ಮಾಡಿ ವಿಧಾನ ಪರಿಷತ್ ಸದಸ್ಯನಾಗಿ ಹನ್ನೆರಡು ವರ್ಷ ಸೇವೆ ಮಾಡಿದ್ದು ನೆನಪಿಸಿಕೊಂಡು ಇಲ್ಲಿ ಸ್ಪರ್ಧಿಸಲು ಒಪ್ಪಿಕೊಂಡೆ. ಅದು ದೈವಿಚ್ಚೆಯಾಗಿತ್ತು. ಅದು ನನ್ನ ಸೌಭ್ಯಾಗ್ಯ ಕೂಡ. ಕರ್ನಾಟಕದ ಭೂಪಟದಲ್ಲಿ ಶಿಗ್ಗಾವಿಗೆ ಅಭಿವೃದ್ಧಿ ಹೊಂದಿದ ತಾಲೂಕಾಗಿ ಪರಿವರ್ತಿಸುವಲ್ಲಿ ನೀವೆ ಕಾರಣೀಭೂತರಾಗಿದ್ದೀರಿ ಎಂದು ಹೇಳಿದರು.


ಸಾಮಾನ್ಯವಾಗಿ ಜನಪ್ರತಿನಿಧಿ ಹಾಗೂ ಜನರ ನಡುವೆ ಕೆಲಸ ಹಾಗೂ ವ್ಯವಹಾರದ ನಡುವೆ ಗೊಂದಲಗಳಿರುತ್ತವೆ. ಆದರೆ, ನಮ್ಮ ನಿಮ್ಮ ನಡುವೆ ಮಾನವೀಯ ಸಂಬಂಧ ಇವೆ. ನಾವೆಲ್ಲ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಎಲ್ಲ ವರ್ಗದ ಜನರು ನನಗೆ ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ವಿಶೇಷವಾಗಿ ಹಿರಿಯರು ಹೆಚ್ಚಿನ ಪ್ರೀತಿ ವಿಶ್ವಾಸ ತೋರಿಸಿದ್ದಾರೆ ಎಂದು ಹೇಳಿದರು.

ನಾನು ಹಲವಾರು ಬಾರಿ ಹೇಳಿದ್ದೇನೆ. ನಮಗೆ ಜನಪ್ರಿಯ ಶಾಸಕರು ಬೇಡ, ಜನಪರ ಶಾಸಕರು ಬೇಕು. ಯಾರು ಅಧಿಕಾರ ಇರಲಿ, ಇಲ್ಲದಿರಲಿ ಜನಪ್ರಿಯತೆಗೆ ತಲೆ‌ ಕೆಡಿಸಿಕೊಳ್ಳದೇ ಜನಪರ ಕೆಲಸ ಮಾಡುವವರು ಜನಪರ ಶಾಸಕರಾಗುತ್ತಾರೆ. ಆದ್ದರಿಂದ ನಾನು ಈಗ‌ ಶಾಸಕನಾಗಿರಲಿಕ್ಕಿಲ್ಲ, ನೀವು ಕೊಟ್ಟ ಅವಕಾಶದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ‌ ಕೆಲಸ ಮಾಡುವ ಅವಕಾಶ ದೊರೆಯಿತು. ಹಲವಾರು ರಾಜಕಾರಣಿಗಳು ಮುಖ್ಯಮಂತ್ರಿಯಾಗಬೇಕು ಎಂದು ಹಲವಾರು ವರ್ಷಗಳಿಂದ ಪ್ರಯತ್ನ ಮಾಡುತ್ತಾರೆ. ಆದರೆ, ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈ ನಾಡಿನ ಸೇವೆ ಮಾಡುವ ಅವಕಾಶ ದೊರೆಯಿತು ಎಂದು ಹೇಳಿದರು.


ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ, ಎರಡು ವರ್ಷದ ಅಧಿಕಾರದಲ್ಲಿ ಅದೇ ರೀತಿ ನಡೆದುಕೊಂಡಿದ್ದೇನೆ. ರೈತರಿಗೆ ಐದು ಲಕ್ಷದವರೆಗೂ ಶೂನ್ಯ ಬಡ್ಡಿ ದರದ‌ ಸಾಲ, ಯಶಸ್ವಿನಿ ಯೋಜನೆ ಮರು ಸ್ಥಾಪನೆ, ರೈತರ ಮಕ್ಕಳಿಗೆ ವಿದ್ಯಾನಿಧಿ, ರೈತರಿಗೆ ಡಿಸೇಲ್ ಸಬ್ಸಿಡಿ ನೀಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಾಯಿತು.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಬೇಡಿಕೆ ಸುಮಾರು ಮೂವತ್ತು ವರ್ಷಗಳಿಂದ ಬೇಡಿಕೆ ಇತ್ತು. ಬಹಳ ಜನರು ಅದನ್ನು ಮುಟ್ಟಲು ಹೋಗಿರಲಿಲ್ಲ, ನಾನು ಮಾಡುವಾಗಲೂ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಹೇಳಿದರು. ಆದರೆ, ನಾನು ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸಲು ಜೇನುಗೂಡಿಗೆ ಕೈ ಹಾಕುತ್ತೇನೆ. ನನಗೆ ಜೇನು ಕಡಿದರೂ ತೊಂದರೆ ಇಲ್ಲ ಅವರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಮೀಸಲಾತಿ ಹೆಚ್ಚಳ ತೀರ್ಮಾನ ಮಾಡಿದೆ. ಎಲ್ಲ ವರ್ಗದವರಿಗೆ ನ್ಯಾಯ ಕೊಡಿಸುವ ಕೆಲಸ ನಾನು ಮಾಡಿದೆ ಎಂದು ಹೇಳಿದರು.

ನೀರಾವರಿ, ವಿದ್ಯುತ್ ಚ್ಚಕ್ತಿ ಉತ್ಪಾದನೆ, ದಾಖಲೆ ಪ್ರಮಾಣದ ‌ಮನೆಗಳ ನಿರ್ಮಾಣ ಎಲ್ಲ ಕೆಲಸಗಳನ್ನು ನಾನು ಮಾಡಿದೆ. ಎಲ್ಲ ತಾಲೂಕುಗಳಿಗೆ 400-500 ಕೋಟಿ ರೂ. ಅನುದಾನ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಒಂಭತ್ತು ಸಾವಿರ ಕೊಠಡಿ ನಿರ್ಮಾಣ ಮಾಡಲು ತೀರ್ಮಾನಿಸಿ ನಾಲ್ಕು ಸಾವಿರ ಕೊಠಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ. ಈ ಸರ್ಕಾರ ಬಂದ ಮೇಲೆ ಕೆಲಸ ನಡೆಯುತ್ತಿಲ್ಲ. ಜನರ ಆರೋಗ್ಯ ಕಾಪಾಡುವ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಯಾಗಿ ಏನು ಮಾಡಬೇಕೊ ಆ ಕೆಲಸ ಮಾಡಿದ್ದೇನೆ. ಅದೆಲ್ಲದರ ಶ್ರೇಯಸ್ಸು ನಿಮಗೆ ಸೇರಬೇಕು ಎಂದರು.


ಈ ಕ್ಷೇತ್ರದಲ್ಲಿ ಈಗಾಗಲೇ ನಡೆಯುತ್ತಿರುವ ಅಭಿವೃದ್ಧಿ ವೇಗ ಅದೇ ರೀತಿಯಲ್ಲಿ ನಡೆಯಬೇಕು. ಈಗಿನ ಸರ್ಕಾರ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ನಮ್ಮ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆಗಳನ್ನು‌ ರದ್ದುಗೊಳಿಸಿದ್ದಾರೆ. ಆದರೂ ಕೂಡ ನಾವು ಹೋರಾಟ ಮಾಡಿ ಅವುಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.


ಹಾವೇರಿ ಗದಗ‌ ಲೋಕಸಭಾ ಕ್ಷೇತ್ರ ಅತ್ಯಂತ ದೊಡ್ಡಕ್ಷೇತ್ರ ಎಂಟು ವಿಧಾನಸಭಾ ಕ್ಷೇತ್ರಗಳಿವೆ, ಆದರೆ, ನಾನು ಶಿಗ್ಗಾವಿ ಸವಣೂರು ಸೇರಿ ವಿಧಾನಸಭಾ ಕ್ಷೇತ್ರಗಳಿವೆ ಎಂದು ತಿಳಿದಿದ್ದೇನೆ. ರೈತರಿಗೆ ಈ ವರ್ಷ ಬರಗಾಲ ಇದ್ದರೂ ಬೆಳೆ ವಿಮೆ ಬಂದಿಲ್ಲ. ಈಗಾಗಲೇ‌ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಅದನ್ನು ಹೋರಾಟ ಮಾಡಿಯಾದರೂ ರೈತರ ವಿಮೆ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಬೇಕಾದ ಎಲ್ಲ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಅಧಿಕಾರ ಶಾಶ್ವತ ಅಲ್ಲ, ಅಭಿವೃದ್ಧಿ ಶಾಶ್ವತ


ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ, ಮನುಷ್ಯ ಶಾಶ್ವತ ಅಲ್ಲ, ಅಧಿಕಾರವೂ ಶಾಶ್ವತ ಅಲ್ಲ. ನಾವು ಮಾಡುವ ಕೆಲಸಗಳು ಶಾಶ್ವತವಾಗಿರುತ್ತವೆ. ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಲ್ಲಿ ಯಾವುದೇ ಯೋಜನೆಗಳು ಇರಲಿಲ್ಲ. ನಾನು ನೀರಾವರಿ ಸಚಿವನಾದ ಸಂದರ್ಭದಲ್ಲಿ ಪ್ರವಾಹ ನಿಯಂತ್ರಣ ಘಟಕ ತೆರೆದು ಬೆಣ್ಣೆಹಳ್ಳ ಪ್ರವಾಹ ನಿಯಂತ್ರಿಸುವ ಕಾರ್ಯ ಮಾಡಲಾಯಿತು. ಈ ರೀತಿಯ ಯೋಜನೆ ಬೇರೆ ಎಲ್ಲಿಯೂ ಇಲ್ಲ.

ಈ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮೊದಲಿನಂತೆಯೇ ಬಂದು ಕೆಲಸ ಮಾಡಿಸಿಕೊಂಡು ಹೋಗಬೇಕು. ನಮ್ಮ ನಿಮ್ಮ ಸಂಬಂಧ ಶಾಶ್ವತವಾಗಿದ್ದು, ನನ್ನ ಉಸಿರಿರುವವರೆಗೂ ನಿಮ್ಮ ಸೇವೆ ಮಾಡಿಕೊಂಡು ಹೋಗುತ್ತೇನೆ. ನಿಮ್ಮ ಸಹೋದರ ದೆಹಲಿಯಲ್ಲಿ ಇದ್ದಾನೆ ಎಂದು ತಿಳಿದು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡು ಹೋಗಿ, ಇದೇ ಪ್ರೀತಿ ವಿಶ್ವಾಸ ನಿರಂತರ ಇರಲಿ ಎಂದು ಹೇಳಿದರು.

More articles

Latest article