ರಂಗಭೂಮಿ
“ಬೇಲಿಗಳ ನಡುವೆ ಹಾವು ಹರಿದಾಡಬಹುದೇ? ಹಕ್ಕಿ ಹಾರಾಡಬಹುದೇ? ಹೌದಾದರೆ ಅದು ನೆಲದ ಬೇಲಿಯಲ್ಲ, ನಮ್ಮ ಮನಸ್ಸಿಗೆ ಹಾಕಿಕೊಂಡಿರೋ ಬೇಲಿ” ಅಂತ ಬರೆದಿಟ್ಟಿದ್ದೆ ಎಲ್ಲೋ. ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕವನ್ನು ಕಳೆದ ವಾರಾಂತ್ಯ ರಂಗಶಂಕರದಲ್ಲಿ ಒಳದುಂಬಿಕೊಳ್ಳುತ್ತ ಕುಳಿತಾಗ ಆ ಸಾಲು ನೆನಪಿನಲ್ಲಿ ಮೂಡಿತು.
ಸಂವೇದನಾಶೀಲ ಯುವ ನಿರ್ದೇಶಕ ಕೆ ಪಿ ಲಕ್ಷ್ಮಣ ಅವರ ರಚನೆ, ವಿನ್ಯಾಸ, ನಿರ್ದೇಶನವಿರುವ ಈ ನಾಟಕದಲ್ಲಿ ಅಲ್ಲಲ್ಲಿ ಎನ್ ಕೆ ಹನುಮಂತಯ್ಯ ಮತ್ತು ಚಂದ್ರಶೇಖರ ಕೆ ಅವರ ಕವಿತೆಗಳು ಸಂಭಾಷಣೆಯ ವಿಸ್ತರಣೆಯಾಗಿ ಸಾಂದ್ರತೆಯನ್ನು ತೀವ್ರಗೊಳಿಸುತ್ತವೆ.
ಕನ್ನಡ ರಂಗಭೂಮಿಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಿರುವ ಕೆ ಪಿ ಲಕ್ಷ್ಮಣ, ಶಕೀಲ್ ಅಹಮದ್ ಮುಂತಾದ ಯುವ ನಿರ್ದೇಶಕರಿಗೆ ಬಸವಣ್ಣನವರ ತತ್ವದಂತೆ ‘ದೇಹವೇ ದೇಗುಲ.’ ದೇಹದ ಸಾಧ್ಯತೆಗಳನ್ನು ಪುನರ್ನಿಮಿಸಿಕೊಳ್ಳುತ್ತಲೇ, ಈಗಾಗಲೇ ಚಾಲ್ತಿಯಲ್ಲಿರುವ ಸಿದ್ಧಮಾದರಿಗಳಿಗೆ ಸವಾಲೆಸೆಯುತ್ತಲೇ ನಾಟಕ ಕಟ್ಟುವ ಇವರು ನಿರೂಪಣೆಯಲ್ಲೂ, ಭಾಷೆಯಲ್ಲೂ, ರಂಗಗೀತೆಯ ಸೊಲ್ಲುಗಳಲ್ಲೂ ಹೊಸತನ ತಂದವರು.
ಲಕ್ಷ್ಮಣ್ ಒಂದು ಸಂದರ್ಶನದಲ್ಲಿ, “ಕಲೆ ಜನರನ್ನು ಬದಲಿಸುತ್ತದೆ, ಜನ ಜಗತ್ತನ್ನು ಬದಲಿಸುತ್ತಾರೆ. ವ್ಯಕ್ತಿ ಮತ್ತು ಸಮುದಾಯ ಎರಡೂ ಬೇರೆಬೇರೆಯೆಂದು ನಾನು ತಿಳಿದಿಲ್ಲ. ಅವೆರಡೂ ಒಂದಕ್ಕೊಂದು ಪೂರಕವಾಗಿವೆ ಅಂತ ನಾನು ನಂಬಿದ್ದೇನೆ” ಅಂದಿದ್ದರು. ಈ ಹೊಸ ನಾಟಕದಲ್ಲೂ ಅವರು ಒಂದು ಸಮುದಾಯದ ‘ನಾದ’ವನ್ನು ಕತೆಗೆ ಪೂರಕವಾಗಿ ರಂಗದ ಮೇಲೆ ತಂದಿದ್ದಾರೆ. ಅವರ ಈ ಹಿಂದಿನ ನಾಟಕ ‘ದಕ್ಲಕಥಾ ದೇವಿಕಾವ್ಯ’ ದಲ್ಲಿರೋ “ಯಾವ ದ್ರಾವಕದಲ್ಲಿ ತೊಳೆದು ಮಾಯಿಸುವುದು ತಾಯೀ/ ಈ ಗಾಯ/ ರಣಗಾಯ/ ಮಹಾನಗರದ ಮಹಾ ಗಾಯ” ಎಂಬ ಸಾಲೇ ಈ ಹೊಸ ನಾಟಕದ ಜೀವವಾಕ್ಯವಾಗಿದೆ.
ಬೆಂಗಳೂರಿನಂಥ ಮಹಾನಗರದಲ್ಲೂ ತಮ್ಮ ಆಹಾರದ ಕಾರಣಕ್ಕಾಗಿ ‘ಅನ್ಯ’ ಗುಂಪಿಗೆ ಸೇರಿಸಲ್ಪಡುವ ಬಾಬ್, ನದಿ ಮತ್ತು ಸಾಕ್ಯ ನಮ್ಮ ನೆಲದ ಪ್ರತಿನಿಧಿಗಳಾಗಿದ್ದಾರೆ. ‘ಬೀಫ್’ ಎಂಬುದನ್ನು ಬಾಯಿಬಿಟ್ಟೂ ಹೇಳಲಾಗದೇ ಅದನ್ನು ‘ಬಿ ಸ್ಟಾರ್ ಸ್ಟಾರ್ ಎಫ್’ ಎಂದು ಕರೆಯುತ್ತ ಸ್ವೀಟ್ ಬಾಕ್ಸ್ ನಲ್ಲಿ ಕಟ್ಟಿ ತಂದೇ ತಿನ್ನಬೇಕಾದ ಸಂದಿಗ್ಧ ಇವರದು. ಹೀಗಿರುವಾಗ ನೆರೆಮನೆಯವರ ನಾಯಿಯೊಂದು ಮೂಳೆಯನ್ನು ಕಚ್ಚಿಕೊಂಡು ಬಂದು ಇವರ ಗುರುತನ್ನು ಜಗಜ್ಜಾಹೀರು ಮಾಡಿಬಿಡುತ್ತದೆ. “ನಾವು ಕೊರಳಿಗೆ ಕಟ್ಟಿಕೊಂಡು ಓಡಾಡದೇ ಹೋದರೂ ಆ ಮೂಳೇನೇ ನಮಗೀಗ ಐಡೆಂಟಿಟಿ ಕಾರ್ಡು” ಎಂದು ಕ್ಷೋಭೆಗೊಳಗಾಗುತ್ತಾಳೆ ನದಿ. ಅವಳ ನೋವು, ನೆಲದ ನೋವು. ಅವಳ ಗಾಯ, ಈ ನೆಲದ ಮಕ್ಕಳಿಗಾದ ಗಾಯ. ಕಾಲ್ಪನಿಕ ಕೇಂದ್ರವೊಂದಕ್ಕೆ ವಾರಸುದಾರರಾಗಿ ನಿಂತವರು ಮಿಕ್ಕವರನ್ನೆಲ್ಲ ‘ಅನ್ಯ’ವೆಂದು ಪರಿಧಿಯಾಚೆಗೆ ತಳ್ಳಿದರೂ, ಆ ಪರಿಧಿಯಲ್ಲಿಯೇ ಸಶಕ್ತವಾದ ಹೊಸ ಕೇಂದ್ರವೊಂದು ರೂಪುಗೊಳ್ಳುವ ಹಾಗೆ ಈ ನಾಟಕದ ಸೌಷ್ಠವವಿದೆ. ಅದು ಎತ್ತುವ ತಾತ್ವಿಕ ಘರ್ಷಣೆ ಸರಳರೇಖಾತ್ಮಕವಾದುದಲ್ಲ.
ಇತ್ತೀಚಿಗೆ ರಂಗಕ್ಕೆ ಬರುತ್ತಿರುವ ನಾಟಕಗಳಲ್ಲಿ ಏಕರೂಪ/ ಏಕವ್ಯಕ್ತಿ ನಿರೂಪಣೆ ಹಿಂದೆ ಸರಿದಿದೆ. ಜೊತೆಗೆ ನಾಟಕವೊಂದಕ್ಕೆ ಕತೆಯೇ ಮುಖ್ಯ ಎಂಬ ಅಂಶವನ್ನೂ ಇಂದಿನ ರಂಗಭೂಮಿ ತೊಡೆದು ಹಾಕಿದೆ. ಬಹುತ್ವವೇ ಈ ಕಾಲದ ಭಾಷೆಯ ಜೀವಾಳವಾಗಿರುವಾಗ ಈ ಮರುಸೃಷ್ಟಿ ಹೊಸ ಕಾಲದ ಅಗತ್ಯವಾಗಿರಬಹುದೇನೋ. ‘ಬಾಬ್ ಮಾರ್ಲಿ..” ನಾಟಕ ಕೂಡ ಈ ವಾದಕ್ಕೆ ಹೊರತಾಗಿಲ್ಲ.
“ಗುರುತನ್ನ ಬಿಡೋದು ನಿಮ್ಮ ಜವಾಬ್ದಾರಿಯಲ್ಲ. ಗುರುತನ್ನ ಎಲ್ಲರೂ ಸೇರಿ ಕಟ್ಟಿರೋವಾಗ, ನೀವೊಬ್ಬರೇ ಹೇಗೆ ಅದನ್ನ ಬಿಡೋಕೆ ಸಾಧ್ಯ?” ಎನ್ನುತ್ತದೆ ಇಲ್ಲಿನ ಒಂದು ಪಾತ್ರ. ನೋವು ಹಂಚಿಕೊಳ್ಳುತ್ತಲೇ ಬಾಂಧವ್ಯವನ್ನು ಗಟ್ಟಿಗೊಳಿಸುವ, ಮತ್ತು ತಾವು ಹಾಯ್ದು ಬಂದ ಹಾದಿಯ ಘನತೆಯನ್ನು ಎತ್ತಿ ಹಿಡಿವ ಗುಣ ಈ ಮೂರು ಪಾತ್ರಗಳನ್ನು ಪಾತ್ರಗಳಾಚೆಗೂ ಬೆಳೆಸುತ್ತದೆ.
ಜಮೈಕಾದ ಸ್ಲಂ ಒಂದರಲ್ಲಿ ಬೆಳೆದು ತನ್ನ ಸಮುದಾಯಕ್ಕೆ ಆಶಾದೀಪವಾದ ಬಾಬ್ ಮಾರ್ಲಿ ನಮ್ಮ ಈ ಬಾಬ್‌ನ ಸ್ಫೂರ್ತಿ ದೇವತೆ. ಕೋಡಿಹಳ್ಳಿಯಿಂದ ತನ್ನ ಮನೆತನದ ಸಂಪ್ರದಾಯವಾದ ಕುಲವಾಡಿಕೆಯನ್ನು ಧಿಕ್ಕರಿಸಿ ಬಂದ ಕುಲುವಾಡಿ ಕೆಂಪಣ್ಣನ ಮಗ ಅವನು. ಊರಿನಲ್ಲಿ ಯಾರೇ ಸತ್ತರೂ ಇವನ ಮನೆತನದವರು ನೆಲದ ಮೇಲೆ ವೃತ್ತ ಬರೆಯಬೇಕಿದೆ. ಬಾಲ್ಯದ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಲೇ ಇವನು ಕೊನೆಗೆ ‘ಬಾಬ್ ಮಾರ್ಲಿ ಫ್ರಂ ಮಿಲ್ಕಿ ವೇ ಗ್ಯಾಲಾಕ್ಸಿ’ಯಾಗುತ್ತಾನೆ. ತನ್ನ ಹೊಸ ಅಸ್ಮಿತೆಯನ್ನು ಕಂಡುಕೊಳ್ಳಲು ಹಳೆಯ ಗುರುತನ್ನು ಬಿಡಬೇಕಾದ ಸಂಕಟವನ್ನೂ, ಸಂಘರ್ಷವನ್ನೂ ಎತ್ತಿ ಹಿಡಿಯಬೇಕಾದ ಪಾತ್ರ ಆತನದ್ದು.
“ಮೇಡಂ, ನಾನು ಬಾಬ್ ಮಾರ್ಲಿ ಗುರುತನ್ನು ಯಾಕೆ ತೊಗೊಂಡೆ ಅಂತ ಕೇಳಿದ್ರಲ್ಲ, ಈ ಸಣ್ಣ ಸರ್ಕಲ್‌ನಿಂದ ಆಚೆ ಬರೋಕೆ. ಜಗತ್ತು ಇಷ್ಟು ವಿಶಾಲವಾಗಿದೆ. ಇಲ್ಲಿಂದ ಊರಿಗೆ ಹೋದ್ರೆ ನನ್ನ ಗುರುತನ್ನ ಇಷ್ಟಕ್ಕೇ ತಂದು ನಿಲ್ಲಸ್ತಾರೆ. ನಮ್ಮೂರಲ್ಲಿ ಕುಲವಾಡಿ ಕೆಂಪಯ್ಯನ ಮಗನಿಗೆ ಇರೋದು ಇಷ್ಟೇ ಜಾಗ. ಈ ಸರ್ಕಲ್‌ನಿಂದೇನೋ ಆಚೆ ಬಂದೆ. ಎಲ್ಲೋದ್ರೂ ಇಂಥ ಸಣ್ಣ ಸಣ್ಣ ಸರ್ಕಲ್ ಹಾಕ್ತಾನೇ ಇರ‍್ತಾರೆ. ಅದನ್ನ ನಾವು ಅಳಸ್ತಾನೇ ಇರ‍್ಬೇಕು” ಎಂದು ಮಾರ್ಮಿಕವಾಗಿ ನುಡಿಯುತ್ತಾನೆ.
“ಬೇರು ತಾನು ಅಂಟಿಕೊಂಡಿರೋ ನೆಲಾನ ತಾನೇ ನಂಬಬೇಕು. ದಾರಿ ಯಾವುದಿದೆ?” ಎನ್ನುತ್ತಾಳೆ ನದಿ. ಬರಡು ನೆಲದಲ್ಲೂ ಸೊಗಸಾಗಿ ಹೂಬಿಟ್ಟು ನಳನಳಿಸೋ ಕಕ್ಕೆ ಹೂವಿನ ಆಶಾವಾದ ಅವಳದು. ನದಿ ಹಾಯ್ದುಬಂದ ಅನುಭವ ಲೋಕ ವೃತ್ತದೊಳಗೊಂದು ವೃತ್ತದ ಹಾಗಿದೆ. ದೇವದಾಸಿಯ ಮಗಳಾಗಿ ಹುಟ್ಟಿ, “ಬೆತ್ತಾಲೆ ಹಟ್ಟಿ ಉಯ್ಯಾಲೆ ಮೈಯ್ಯಿ/ ಮುಟ್ಟಾದೆ ಮುಟ್ಟೋ ನೂರೊಂದು ಕೈಯ್ಯಿ” ಎಂಬ ನರಕವನ್ನು ಹಾಯ್ದು ಬಂದ ನದಿ ವಿದ್ಯೆಯೆಂಬೋ ತಾರಿ ದೋಣಿಯನ್ನೇರಿ ಆಚೆ ದಡ ತಲುಪಿದವಳು. “ಶೋಷಕರನ್ನು ಬೆಂಬಲಿಸುವವರೂ ಶೋಷಕರೇ” ಎಂಬ ದಿಟ್ಟ ನಿಲುವಿನಾಕೆ. ಬೆಲ್ ಹುಕ್ಸ್ ಓದಿಕೊಂಡಾಕೆ. ಪಾತ್ರವಾಗಿಯೂ ಇನ್ನೊಂದು ಜೀವ ಹಿಂಸೆಗೊಳಗಾಗುವುದ ಕಾಣಲಾರದಾಕೆ.
ತನ್ನ ಕತೆಯನ್ನು ಪ್ರೇಕ್ಷಕರ ಮುಂದೆ ಸ್ವಚ್ಛಂದವಾಗಿ ಹೇಳಿಕೊಳ್ಳಲೂ ಅವಳಿಗೆ ಹಿಂಜರಿಕೆಯಿದೆ. “ಇಲ್ಲಿ ಎದುರು ಕುಂತಿರೋ ಜನಗಳ ಮುಂದೆ ಬೆತ್ತಲೆಯಾಗೋವಷ್ಟು ನಂಬಿಕೆ ನನಗೆ ಇವರ ಮೇಲಿಲ್ಲ” ಎನ್ನುತ್ತಾಳೆ. ನಾಟಕವೆಂಬ ಮಾಧ್ಯಮ ನಿಂತಿರೋದೇ ನಾಟಕ ಆಡುವವರ ಮತ್ತು ನೋಡುವವರ ನಡುವೆ ಸೃಷ್ಟಿಯಾದ ನಂಬಿಕೆಯ ಮೇಲೆ ಎಂಬ ಮೂಲತತ್ವಕ್ಕೇ ಸವಾಲೆಸೆವ ಈ ಮಾತು ದಿಕ್ಕೆಡಿಸುವಂತಿದೆ. ‘ಬ್ರೇಕಿಂಗ್ ದ ಫೋರ್ಥ್ ವಾಲ್’ ರೀತಿಯಲ್ಲಿ ನದಿ ನಮಗೆ ರಂಗದಾಚೆಯ ಲೋಕವನ್ನು ಅನಾವರಣಗೊಳಿಸುತ್ತಿರಬಹುದು.
ಕತೆಯಲ್ಲಿ ಅಪೂರ್ಣವಾಗೇ ಉಳಿವ ಸಾಕ್ಯನ ಭೂತ ಕಾಲದ ವಿವರಗಳು ಇನ್ನೂ ಸಂವಹಿಸಬೇಕಾದ ವಿವರಗಳೆಡೆಗೆ ಗುರಿ ತೋರಿಸುತ್ತಿರಬಹುದು. “ಎಲ್ಲೆಲ್ಲೂ ಕತ್ತಲೆಯೇ ಅನ್ನಿಸಿದರೆ, ಇನ್ನೊಮ್ಮೆ ನೋಡು. ನೀನೇ ಬೆಳಕಾಗಿರಬಹುದು” ಎಂಬ ರೂಮಿ ಪದ್ಯದಂತೆ ಎದೆಯೊಳಗೆ ನೋವಿನ ಚುಚ್ಚುಮದ್ದನ್ನು ಇರಿಸಿಕೊಂಡು ಬೆಳಗುತ್ತಿರುವ ಈ ನಾಟಕ ಬದಲಾಗಬೇಕಾದ ಸಮಾಜದೆಡೆಗೆ ಬೆರಳಿಟ್ಟು ತೋರಿಸುತ್ತಿದೆ. ‘ದಕ್ಲಕಥಾ..”ದ ಪಾತ್ರಗಳಂತೆಯೇ, ‘ಬಾಬ್ ಮಾರ್ಲಿ..”ಯ ಬಾಬ್, ನದಿ ಮತ್ತು ಸಾಕ್ಯ ತಮ್ಮ ‘ಲಿವ್ಡ್ ಎಕ್ಸ್‌ಪೀರಿಯನ್ಸ್’ ಗಳ ಮುಖಾಂತರ ಪ್ರೇಕ್ಷಕರನ್ನು ಕೈಹಿಡಿದೆತ್ತಿ ಒಳ ಕರೆದುಕೊಳ್ಳುತ್ತಾರೆ, ತಮ್ಮ ಅನುಭವ ದ್ರವ್ಯವನ್ನು ಉಣಬಡಿಸುತ್ತ ಪ್ರಶ್ನೆಗಳಿಗೆ ಮುಖಾಮುಖಿಯಾಗಿಸುತ್ತಾರೆ. ಕತ್ತಲೆ-ಬೆಳಕನ್ನು ಎದೆಯೊಳಗೆ ಪೋಣಿಸುತ್ತಲೇ ಬದುಕುವ ಮಿಂಚುಹುಳಗಳಂತಿದ್ದಾರೆ.
ಸ್ವೀಟ್ ಕವರ್‌ನಲ್ಲಿಟ್ಟು ತಂದರೂ ಶೀಕ್ ಕಬಾಬ್‌ನ ಹದವಾದ ಪರಿಮಳ ನಾಟಕದುದ್ದಕ್ಕೂ ಪಸರಿಸಿಕೊಂಡು ಪ್ರಜ್ಞೆಯನ್ನೂ, ರುಚಿಯನ್ನೂ ಎಚ್ಚರಗೊಳಿಸುತ್ತದೆ. ಸಮಕಾಲೀನ ನಾಟಕಗಳಲ್ಲಿ ಹೀಗಾಗುವುದು ಅಪರೂಪ.
ಕಾವ್ಯಾ ಕಡಮೆ
ಕನ್ನಡದ ಪ್ರತಿಭಾನ್ವಿತ ಯುವ ಲೇಖಕಿ, ಕವಿ.