ತಮಗೆಲ್ಲಾ ತಿಳಿದಿರುವ ಹಾಗೆ, ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕುಡಿಯುವ ನೀರಿನ ಯೋಜನೆ ವಿರುದ್ಧದ ಹೋರಾಟ ಕೋಡ್ಲು ಗ್ರಾಮದಲ್ಲಿ 18ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ, ಮಾ. 14ರಂದು ಮಲೆನಾಡಿನ ಧೀಮಂತ ರಾಜಕಾರಣಿ, ಗೇಣಿದಾರರ ಆಶಾಕಿರಣ, ರಾಜ್ಯ ಕಂಡ ಮಾದರಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರ 101ನೇ ಜನ್ಮದಿನಾಚರಣೆಯನ್ನು ಪ್ರತಿಭಟನಾ ಸ್ಥಳವಾದ ಕೋಡ್ಲು ಗ್ರಾಮದ ಹೆಗ್ಗೋಡಿನಲ್ಲಿ ಆಚರಿಸಲಾಯಿತು.
ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿರುವ ಗೋಪಾಲಗೌಡ ಪ್ರತಿಮೆಗೆ ಕೋಡ್ಲು ವೆಂಕಟೇಶ್ ಮಾಲಾರ್ಪಣೆ ಮಾಡಿದರು. ಸಾಹಿತಿ, ನಿವೃತ್ತ ಪ್ರಾಂಶುಪಾಲರಾದ ಡಾ. ಎಲ್. ಸಿ. ಸುಮಿತ್ರಾ ಯುವಕರ ಬೈಕ್ ರಾಲಿಗೆ ಚಾಲನೆ ನೀಡಿದರು. ಈ ಸಮಯದಲ್ಲಿ ಮಾತನಾಡಿದ ಅವರು, “ಶಾಂತವೇರಿ ಗೋಪಾಲಗೌಡರ ಹೋರಾಟ, ಬದುಕು ಶಾಶ್ವತ ಮಾದರಿಯಾಗಿ ನಮ್ಮ ಮುಂದಿದೆ. ಇವತ್ತಿನ ಯುವಜನತೆ ಅವರ ಕುರಿತು ಆಳವಾದ ಅಧ್ಯಯನ ನಡೆಸುವ ಅಗತ್ಯವಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತೀರ್ಥಹಳ್ಳಿಗೆ ಅಪ್ರಸ್ತುತ ಮತ್ತು ಅವೈಜ್ಞಾನಿಕ,’’ ಎಂದರು.
ನಂತರ ನೂರಾರು ಸಂಖ್ಯೆಯಲ್ಲಿ ಯುವಕರು ತೀರ್ಥಹಳ್ಳಿಯ ಪಟ್ಟಣದಲ್ಲಿ ಬೈಕ್ ರಾಲಿ ನಡೆಸಿದರು. ಅಲ್ಲಿಂದ ರಾಲಿ ಜೆಜೆಎಂ ಕಾಮಗಾರಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಪ್ರತಿಭಟನಾನಿರತ ರೈತರ ಜೊತೆಗೂಡಿದರು.
ಈ ಸಮಯದಲ್ಲಿ ಮಾತನಾಡಿದ ಸಾಹಿತಿ, ಪತ್ರಕರ್ತ ಶಿವಾನಂದ ಕರ್ಕಿ, “ಕಾರ್ಪೊರೇಟ್ ದೊರೆಗಳ ಹಿತಾಸಕ್ತಿಗಾಗಿ ಜನರನ್ನು ಗುಲಾಮರನ್ನಾಗಿಸುವುದೇ ಇವತ್ತಿನ ಎಲ್ಲಾ ಸರಕಾರಗಳ ಪರಮ ಪವಿತ್ರ ಕರ್ತವ್ಯ ಎಂದುಕೊಂಡಿದ್ದಾರೆ” ಎಂದು ಹೇಳಿದರು.
“ಆಗುಂಬೆಯಂತಹ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಸುರಂಗ ಕೊರೆಯುವ ಯೋಜನೆ ತರುತ್ತಾರೆ, ಪರಿಸರ ನಾಶಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನಂತಹ ಬೃಹತ್ ಯೋಜನೆಗಳನ್ನು ನಿರ್ಮಿಸುತ್ತಾರೆ. ಹಿಂದೆ ಎಂಪಿಎಂ ಕಾರ್ಖಾನೆ ವಿಚಾರದಲ್ಲೂ ಇದೇ ಮಾದರಿಯು ಮಲೆನಾಡಿನ ಪರಿಸರ ವಿರೋಧಿ ಯೋಜನೆಗಳನ್ನು ತಂದವರು ನಮ್ಮನ್ನು ಆಳುವವರೆ. ಇದೀಗ ಎಂ. ಪಿ. ಎಂ ಅರಣ್ಯ ಪ್ರದೇಶವನ್ನೇ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗೆ ಕೃಷಿ, ನೀರು, ರಸ್ತೆ, ಅರಣ್ಯಗಳನ್ನು ಕಾರ್ಪೊರೇಟ್ ದೊರೆಗಳಿಗೆ ದೇಣಿಗೆ ನೀಡುವ ತಲೆತಿರುಕ ಪ್ರಭುತ್ವಕ್ಕೆ ಒದ್ದು ಬುದ್ದಿ ಹೇಳಲು ಶಾಂತವೇರಿಯವರ ಬದುಕೇ ನಮಗೆ ಆದರ್ಶ, ಅವರ ಜೀವನವೇ ನಮಗೆ ಸ್ಪೂರ್ತಿಯಾಗಬೇಕು.
ಈಗಿನ ರಾಜಕೀಯ ಪಕ್ಷಗಳ ಕಾರ್ಯಕರ್ತರುಗಳು ನೇತಾರರನ್ನು ಓಲೈಸಲು ನರ್ತನ ಮಾಡುತ್ತಾರೆ. ಅಂದು ಗೋಪಾಲಗೌಡರು ಮೈಸೂರಿನ ಮಹಾರಾಜರಿಗೆ ದಿಕ್ಕಾರ ಕೂಗಿ ಇದು ಜನತಂತ್ರ, ನೀವು ಅಂಬಾರಿಯಿಂದ ಕೆಳಗಿಯಲೇಬೇಕೆಂದು ಕೂಗುತ್ತಾ ಪೊಲೀಸರ ದೌರ್ಜನ್ಯವನ್ನೂ ಲೆಕ್ಕಿಸದೆ ದಸರಾ ಮೆರವಣಿಗೆಯ ರಸ್ತೆಗೆ ಅಡ್ಡ ನಿಂತಿದ್ದರು” ಎಂದು ಜ್ಞಾಪಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮದಿನಾಚರಣೆ ಪ್ರಯುಕ್ತ ಗ್ರಾಮಸ್ಥರು ಸಿಹಿ ಹಂಚಿದರು. ಇದೇ ಸಮಯದಲ್ಲಿ, ಅವೈಜ್ಞಾನಿಕ ಜೆಜೆಎಂ ಕಾಮಗಾರಿ ವಿರೋಧಿ ಹೋರಾಟವು ಮುಂದುವರಿಯಲಿದೆ ಎಂದು ಘೋಷಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ನಾಯಕರಾದ ಕೋಡ್ಲು ವೆಂಕಟೇಶ್, ಜಿ. ಎಸ್. ರಾಜೇಂದ್ರ, ಹೊರಬೈಲು ರಾಮಕೃಷ್ಣ, ಕೆರೋಡಿ ಕೃಷ್ಣಪ್ಪ, ಕರವೇ ವೆಂಕಟೇಶ್ ಹೆಗಡೆ ಹಾಗೂ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿಯ ಹೋರಾಟಗಾರರು ಹಾಜರಿದ್ದರು.