ಬೆಂಗಳೂರು: ಕಾರಿನಲ್ಲಿ ಸುತ್ತಾಡಿಸುತ್ತಾ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 28 ವರ್ಷದ ನೃತ್ಯ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ ಎಂದು ಕಾಡುಗೋಡಿ ಪೊಲೀಸರು ತಿಳಿಸಿದ್ದಾರೆ. ನೃತ್ಯ ಶಿಕ್ಷಕ ಭಾರತಿ ಕಣ್ಣನ್ ಬಂಧಿತ ಆರೋಪಿ.
ಮೇ 24 ರಂದು ಕಾಡುಗೋಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತ್ರಸ್ತೆಯ ಬಳಿ ಆರೋಪಿ ಕಣ್ಣನ್ ಕಾರು ನಿಲ್ಲಿಸಿದ್ದಾನೆ. ನಂತರ ತಾನು ನೃತ್ಯ ಶಿಕ್ಷಕ ಎಂದು ಪರಿಚಯಿಸಿಕೊಂಡು ನೃತ್ಯ ತರಗತಿ ಕುರಿತು ಮಾಹಿತಿ ನೀಡುವ ನೆಪದಲ್ಲಿ ಬಾಲಕಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಸಂತ್ರಸ್ತೆ ಕಾರು ಹತ್ತುತ್ತಿದ್ದಂತೆ, ಆರೋಪಿ ಬಾಗಿಲುಗಳನ್ನು ಲಾಕ್ ಮಾಡಿಕೊಂಡು ದೂರಕ್ಕೆ ಕರೆದೊಯ್ದಿದ್ದಾನೆ. ಈ ಸಮಯದಲ್ಲಿ, ಅವನು ಹುಡುಗಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ.
ಸ್ವಲ್ಪ ಸಮಯದ ನಂತರ ಕಣ್ಣನ್, ಸಂತ್ರಸ್ತೆಯನ್ನು ತಾನು ಕರೆದುಕೊಂಡು ಹೋದ ಸ್ಥಳದಲ್ಲೇ ಇಳಿಸಿ ಹೊರಟು ಹೋಗಿದ್ದಾನೆ. ಸಂತ್ರಸ್ತ ಬಾಲಕಿ ಮನೆ ತಲುಪಿದ ನಂತರ, ಘಟನೆಯ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ಆಗ ಪೋಷಕರು ಕಣ್ಣ್ ನ್ ವಿರುದ್ಧ ದೂರು ದಾಖಲಿಸಿದ್ದರು. ತನಿಖೆ ನಡೆಸಿ ಕಣ್ಣನ್ ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.