ಚೆನ್ನೈ: ಮೂರುವರೆ ವರ್ಷದ ಮಗುವಿನ ಮೇಲೆ 16 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲೈಂಗಿಕ ದೌರ್ಜನ್ಯಕ್ಕೆ ಮಗುವಿನ ನಡವಳಿಕೆಯೇ ಈ ದುಷ್ಕೃತ್ಯಕ್ಕೆ ಕಾರಣ ಎಂದು ಹೇಳಿದ್ದ ಮೈಲಾಡುತುರೈ ಜಿಲ್ಲಾಧಿಕಾರಿ ಎ.ಪಿ ಮಹಾಭಾರತಿ ಅವರನ್ನು ತಮಿಳುನಾಡು ಸರ್ಕಾರ ವರ್ಗಾವಣೆ ಮಾಡಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಮಹಾಭಾರತಿ, ನನಗೆ ಬಂದ ಮಾಹಿತಿಯ ಪ್ರಕಾರ ಮೂರುವರೆ ವರ್ಷದ ಮಗು ತಪ್ಪು ರೀತಿಯಲ್ಲಿ ವರ್ತಿಸಿದೆ. ಆರೋಪಿಯ ಮುಖದ ಮೇಲೆ ಮಗು ಉಗುಳಿದೆ. ಇದು ದೌರ್ಜನ್ಯಕ್ಕೆ ಕಾರಣವಾಗಿರಬಹುದು. ಆದ್ದರಿಂದ ಪೋಕ್ಸೊ ಪ್ರಕರಣದಲ್ಲಿ ಎರಡೂ ಕಡೆಯ ವಿಷಯಗಳನ್ನು ಪರಿಗಣಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದರು.
ಜಿಲ್ಲಾಧಿಕಾರಿಯ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಉನ್ನತ ಅಧಿಕಾರಿ ಕೃತ್ಯದ ಕುರಿತು ಈ ರೀತಿ ಯೋಚಿಸಿರುವುದಕ್ಕೆ ಟೀಕೆ ಮತ್ತು ಆಘಾತ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯನ್ನು ಮೈಲಾಡುತುರೈನಿಂದ ವರ್ಗಾಯಿಸಲಾಗಿದೆ. ಮೈಲಾಡುತುರೈನಲ್ಲಿ ಮೂರುವರೆ ವರ್ಷದ ಮಗುವಿನ ಮೇಲೆ 16 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.