ಗೌಹಾಟಿ: ರಾಜ್ಯದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸವನ್ನು ನಿಷೇಧಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಸ್ವತಃ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ನಿರ್ಧಾರವನ್ನು ಪ್ರಕಟಿಸಿ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಾದ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಗೋಮಾಂಸವನ್ನು ನೀಡುವಂತಿಲ್ಲ.
ಈ ಹಿಂದೆ ದೇವಸ್ಥಾನಗಳ ಬಳಿ ಮಾತ್ರ ಗೋಮಾಂಸ ತಿನ್ನುವುದನ್ನು ನಿಷೇಧಿಸುವುದು ಅವರ ನಿರ್ಧಾರವಾಗಿತ್ತು, ಆದರೆ ಇದೀಗ ಇಡೀ ರಾಜ್ಯಕ್ಕೆ ವಿಸ್ತರಿಸಿದ್ದಾರೆ. ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ 2021 ರ ಅಡಿಯಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ. ಹಿಂದೂ, ಜೈನ ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಮತ್ತು ದೇವಾಲಯಗಳ ಸುತ್ತ ಐದು ಕಿಮೀ ವ್ಯಾಪ್ತಿಯೊಳಗೆ ಗೋ ಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ಈ ಮೊದಲು ನಿಷೇಧಿಸಲಾಗಿತ್ತು.
ಈ ಮಧ್ಯೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಶಾಸಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ಹಫೀಜ್ ರಫೀಕುಲ್ ಇಸ್ಲಾಂ ಅವರು ಜನರು ಏನು ತಿನ್ನುತ್ತಾರೆ ಅಥವಾ ಧರಿಸುತ್ತಾರೆ ಎಂಬುದನ್ನು ಕ್ಯಾಬಿನೆಟ್ ನಿರ್ಧರಿಸಬಾರದು ಎಂದು ಟೀಕಿಸಿದ್ದಾರೆ.
ಗೋಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿವೆ.