ಬೆಂಗಳೂರು: ಹಿರಿಯ ಪತ್ರಕರ್ತರಾದ ಎಂ.ಕೆ.ಭಾಸ್ಕರರಾವ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೂಲತಃ ಶಿರಸಿ ತಾಲ್ಲೂಕಿನವರಾದ ಭಾಸ್ಕರರಾವ್ ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ಅಲ್ಲಿಯೇ ಶಿಕ್ಷಣ ಮುಗಿಸಿ ಪತ್ರಿಕೋದ್ಯಮಕ್ಕೆ ಬಂದರು.
ಭಾಸ್ಕರರಾವ್ ಅವರು 1968ರಲ್ಲಿ ‘ಸಂಯುಕ್ತ ಕರ್ನಾಟಕ’ದ ಮೂಲಕ ವೃತ್ತಿ ಆರಂಭಿಸಿದರು. ಮುಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ಮೂರು ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿ ಸಹಾಯಕ ಸಂಪಾದಕರಾಗಿ ನಿವೃತ್ತರಾದರು. ಅವರು ರಾಯಚೂರು ಜಿಲ್ಲಾ ವರದಿಗಾರರಾಗಿದ್ದಾಗ, ಆ ಭಾಗದ ಸಮಸ್ಯೆಗಳ ಕುರಿತು ಪ್ರಜಾವಾಣಿಯಲ್ಲಿ ಮೂಡಿಸಿದ ವರದಿಗಳು ಗಮನ ಸೆಳೆದಿದ್ದವು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಅಂಕಣಕಾರರಾಗಿ ಹೆಸರಾಗಿದ್ದರು. ಸಿನೆಮಾ ಪತ್ರಕರ್ತರಾಗಿಯೂ ಕೆಲವು ಕಾಲ ಕಾರ್ಯನಿರ್ವಹಿಸಿದ್ದರು.
ಸಮಾಜಮುಖಿ ಪತ್ರಕರ್ತರಾಗಿದ್ದ ಭಾಸ್ಕರರಾವ್ ತಮ್ಮ ಹರಿತ ಬರೆವಣಿಗೆ ಮಾತ್ರವಲ್ಲದೇ ಮಾತಿನಿಂದಲೂ ಗಮನಸೆಳೆದಿದ್ದರು. ಚುನಾವಣೆ ವೇಳೆ ಹಲವಾರು ವಾಹಿನಿಗಳಲ್ಲಿ ವಿಶ್ಲೇಷಣೆ ಮಾಡುತಿದ್ದರು. ಪ್ರಚಲಿತ ವಿದ್ಯಾಮಾನಗಳ ಕುರಿತು ನಿಖರ ಮಾತಿಗೆ ಹೆಸರಾಗಿದ್ದರು. ದಿನೇಶ್ ಬಾಬು ನಿರ್ದೇಶನದ ಉಪೇಂದ್ರ ಮುಖ್ಯ ಪಾತ್ರದಲ್ಲಿದ್ದ ‘ಹಾಲಿವುಡ್’ ಸಿನಿಮಾ ಸೇರಿದಂತೆ ಕೆಲ ಚಿತ್ರಗಳಲ್ಲಿಯೂ ಅಭಿನಯಿಸಿದ್ದ ಎಂ.ಕೆ. ಭಾಸ್ಕರ್ ರಾವ್ ರಂಗಕರ್ಮಿಯಾಗಿಯೂ ಸಕ್ರಿಯರಾಗಿದ್ದರು.
ಭಾಸ್ಕರರಾವ್ ಅವರು ಖಾದ್ರಿ ಶಾಮಣ್ಣ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಭಾಸ್ಕರ್ ರಾವ್ ನಿಧನಕ್ಕೆ ಪ್ರೆಸ್ ಕ್ಲಬ್ ಬೆಂಗಳೂರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಪತ್ರಕರ್ತರ ಸಂಘಟನೆಗಳು ದುಃಖ ವ್ಯಕ್ತಪಡಿಸಿವೆ.