ನೀನು ತೆಳ್ಳಗೆ ಬೆಳ್ಳಗೆ ಸುಂದರವಾಗಿದ್ದೀಯಾ ಎಂದು ಮೆಸೇಜ್‌ ಕಳುಹಿಸಿದರೆ ಜೈಲು ಶಿಕ್ಷೆ ಗ್ಯಾರಂಟಿ!

Most read

ಮುಂಬೈ: ನೀನು ತೆಳ್ಳಗೆ ಬೆಳ್ಳಗೆ ಸುಂದರವಾಗಿದ್ದೀಯಾ ಎಂದು ಅಪರಿಚಿತ ಮಹಿಳೆಗೆ ರಾತ್ರಿ ವೇಳೆ ಮೊಬೈಲ್‌ ಸಂದೇಶ ಕಳುಹಿಸುವುದನ್ನು ಆಶ್ಲೀಲ ಎಂದು ಪರಿಗಣಿಸುವುದಾಗಿ ಮುಂಬೈ ಸೆಷನ್ಸ್‌ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಾಜಿ ಮಹಿಳಾ ಕಾರ್ಪೊರೇಟರ್ ವೊಬ್ಬರಿಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಆರೋಪಿಯ ಶಿಕ್ಷೆಯನ್ನು ಎತ್ತಿಹಿಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಜಿ. ಧೋಬ್ಲೆ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

ಅಶ್ಲೀಲತೆಯನ್ನು ಸಮಕಾಲೀನ ಸಮುದಾಯದ ಮಾನದಂಡಗಳನ್ನು ಅನ್ವಯಿಸುವ ಮೂಲಕ ನಿರ್ಣಯಿಸಬೇಕು ಎಂದು ಹೇಳಿರುವ ನ್ಯಾಯಾಲಯ, ಫೆಬ್ರುವರಿ 18ರ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ದೂರುದಾರರಿಗೆ ರಾತ್ರಿ 11ರಿಂದ 12.30ರ ನಡುವೆ ನೀನು ತೆಳ್ಳಗೆ, ಬೆಳ್ಳಗೆ ಸುಂದರವಾಗಿದ್ದೀಯಾ, ನಾನು ನಿನ್ನನ್ನು ಇಷ್ಟಪಡುತ್ತೇನೆ, ನನ್ನ ವಯಸ್ಸು 40. ನೀನಗೆ ವಿವಾಹವಾಗಿದೆಯೇ ಅಥವಾ ಇಲ್ಲವೇ? ಎಂಬ ಸಂದೇಶಗಳೊಂದಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿರುವುದನ್ನು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.

ಗೌರವದಿಂದ ಜೀವನ ನಡೆಸುತ್ತಿರುವ ಯಾವುದೇ ವಿವಾಹಿತ ಮಹಿಳೆ ಅಥವಾ ಅವರ ಪತಿ ಅಂತಹ ವಾಟ್ಸಾಪ್ ಸಂದೇಶಗಳು ಮತ್ತು ಅಶ್ಲೀಲ ಚಿತ್ರಗಳನ್ನು ಸಹಿಸಿಕೊಳ್ಳುವುದಿಲ್ಲ, ವಿಶೇಷವಾಗಿ ಸಂದೇಶ ಕಳುಹಿಸಿದವರು ಮತ್ತು ದೂರುದಾರರು ಪರಸ್ಪರ ಪರಿಚಿತರಲ್ಲದೇ ಇರುವಾಗ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ  ಎಂದು ನ್ಯಾಯಾಲಯವು ಹೇಳಿದೆ. ದೂರುದಾರರ ಜೊತೆ ಯಾವುದೇ ಸಂಬಂಧವಿರುವ ಬಗ್ಗೆ ಆಪಾದಿತರು ಯಾವುದೇ ದಾಖಲೆ ಸಲ್ಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ರೀತಿಯ ಅಶ್ಲೀಲ ಸಂದೇಶ ಕಳುಹಿಸಿರುವುದು ಮಹಿಳೆಯ ಘನತೆಗೆ ಧಕ್ಕೆಯಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 2022ರಲ್ಲಿ ತೀರ್ಪು ನೀಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಆರೋಪಿಯು ತಪ್ಪಿತಸ್ಥನೆಂದು ತೀರ್ಮಾನಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ, ಆ ಆದೇಶ ಪ್ರಶ್ನಿಸಿ ಆರೋಪಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದ. ರಾಜಕೀಯ ದುರುದ್ದೇಶದಿಂದ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದ್ದ. ಆದರೆ, ನ್ಯಾಯಾಲಯವು ಆರೋಪಿಯ ವಾದವನ್ನು ತಿರಸ್ಕರಿಸಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

More articles

Latest article