ಕುವೆಂಪು ವಿವಿಯಲ್ಲಿ ನಾಳೆ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರಸಂಕಿರಣ: ಕುವೆಂಪು, ಅಂಬೇಡ್ಕರ್‌ ಆಶಯಗಳಿಗೆ ಧಕ್ಕೆ ಎಂದು ವ್ಯಾಪಕ ವಿರೋಧ; ಕಾರ್ಯಕಮ ರದ್ದುಗೊಳಿಸಲು ಆಗ್ರಹ

Most read

ಶಿವಮೊಗ್ಗ: ಸ್ವರ್ಣ ರಶ್ಮಿ ಟ್ರಸ್ಟ್ ಮತ್ತು ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಆಯೋಜಿಸಿರುವ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರ ಸಂಕಿರಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸಾಹಿತಿಗಳು, ಸಿಂಡಿಕೇಟ್‌ ಸದಸ್ಯರು ಲೇಖಖರು ಮತ್ತು ವಿವಿಯ ವಿದ್ಯಾರ್ಥಿಗಳು  ವಿವಿ ಆವರಣದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದನ್ನು ಉಗ್ರವಾಗಿ ಖಂಡಿಸಿದ್ದಾರೆ. ಮತ್ತೊಂದು ಕಡೆ ವಿವಿ ಕುಲಪತಿ ಶರತ್ ಅನಂತಮೂರ್ತಿ ಅವರು ವಿಶ್ವವಿದ್ಯಾನಿಲಯ ಆವರಣದಲ್ಲಿ ವಿಚಾರ ಸಂಕಿರಣ ಅಯೋಜಿಸಿರುವುದನ್ನು ಸಮರ್ಥಿಸಿಕೊಂಡಿರುವುದು ಮತ್ತಷ್ಟು ಕೆರಳಿಸಿದೆ.

ಸಿಂಡಿಕೇಟ್ ಸದಸ್ಯ ಕೆ.ಪಿ ಶ್ರೀಪಾಲ್ ಹೇಳಿಕೆ:

ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ ಶ್ರೀಪಾಲ್ ಅವರು ಈ ವಿಚಾರಸಂಕಿರಣದ ದ ಔಚಿತ್ಯವನ್ನು ಪ್ರಶ್ನಿಸಿ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ.

ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವ ಹಾಗೂ ಸಂಘಪರಿವಾರದ ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಇದೀಗ ಭಗವದ್ಗೀತೆಯ ಹೆಸರಲ್ಲಿ ಕುವೆಂಪು ವಿವಿಗೆ ಬರುತ್ತಿದ್ದಾರೆ. ಇವರೆಲ್ಲರೂ ಗಾಂಧಿ, ಬುದ್ದ, ಬಸವಣ್ಣ , ಅಂಬೇಡ್ಕರ್ ನಿಲುವುಗಳನ್ನು ವಿರೋಧಿಸುವ ಸಂಸ್ಥೆಯ ಭಾಗವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇಡೀ ದೇಶದ ವಿಶ್ವ ವಿದ್ಯಾಲಯಗಳನ್ನು ಒಂದು ಸಿದ್ದಾಂತದ ಅಡಿಯಲ್ಲಿ ತಂದು, ವಿದ್ಯಾರ್ಥಿಗಳಿಗೆ ಸಂವಿದಾನಕ್ಕಿಂತ ಹೆಚ್ಚಾಗಿ ಮನುಸ್ಮೃತಿಯನ್ನು ತಲೆಗೆ ತುಂಬುವ ಸಂಚನ್ನು ಸಂಘಪರಿವಾರ ರೂಪಸಿದ್ದು, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಚಾತುರ್ವರ್ಣ ವ್ಯವಸ್ಥೆಯ ಮೂಲವನ್ನು ಭಗವದ್ಗೀತೆಯ ಮೂಲಕ ಸಮರ್ಥಿಸಲಾಗುತ್ತದೆ, ಇದು ನಾವು ಒಪ್ಪಿಕೊಂಡಿರುವ ಈ ದೇಶದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ದವಾಗಿರುತ್ತದೆ. ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಹೆಸರಿನ ವಿಶ್ವ ವಿದ್ಯಾಲಯದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿರುವ ಕಾರ್ಯಕ್ರಮಗಳು ನಡೆಯುವುದನ್ನು ಖಂಡಿಸುವುದಾಗಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಕೂಡಲೇ ನ. 18 ರಂದು ಹಮ್ಮಿಕೊಂಡಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಎಂಬ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಶ್ರೀಪಾಲ್‌ ಆಗ್ರಹಿಸಿದ್ದು, ವಿವಿ ನಿರ್ಧಾರ ಕುರಿತು ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಿಗೂ ಪತ್ರ ಬರೆದಿದ್ದಾರೆ.

ದಸಂಸ ವಿರೋಧ:

ಕರ್ನಾಟಕ ದಲಿತ ಸಂಘರ್ಷ ಸಮಿತಿಯೂ ಈ ವಿಚಾರ ಸಂಕಿರಣವನ್ನು ತೀವ್ರವಾಗಿ ವಿರೋಧಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಅವರು, ವಿಶ್ವಮಾನವ ಸಂದೇಶವನ್ನು ಬೋಧಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಈ ವಿಶ್ವವಿದ್ಯಾನಿಲಯದಲ್ಲಿ ಇಂತಹ ಕಾರ್ಯಕ್ರಮ ನಡೆಸುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವ ಮೂಲಕ ಕುಲಪತಿಗಳೇ ಕುವೆಂಪುರವರ ಆದರ್ಶ ಮತ್ತು ಅಂಬೇಡ್ಕರ್ ರವರ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ ಎಂದು ಟೀಕಿಸಿದ್ದಾರೆ.

ಈ ಕಾರ್ಯಕ್ರಮವನ್ನು ರದ್ದುಗೊಳಿಸದಿದ್ದರೆ ಸಮಿತಿಯ ವತಿಯಿಂದ ಪ್ರತಿಭಟನಾ ತಮಟೆ ಚಳುವಳಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಲೇಖಕ ಹರ್ಷಕುಮಾರ್ ಕುಗ್ವೆ ಬಹಿರಂಗ ಪತ್ರ:

ವಿವಿಯ ವಿದ್ಯಾರ್ಥಿ ಪತ್ರಕರ್ತ ಮತ್ತು ಲೇಖಕ ಹರ್ಷಕುಮಾರ್ ಕುಗ್ವೆ ಅವರೂ ಸಹ ಎಲ್ಲರಿಗಂತ ಮೊದಲು ಧ್ವನಿ ಎತ್ತಿದ್ದು ಕುಲಪತಿ ಶರತ್‌ ಅನಂತಮೂರ್ತಿ ಅವರಿಗೆ ಬಹಿರಂಗ ಪತ್ರ ಬರೆದು ಕಾರ್ಯಕ್ರಮದ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.

ಭಗವದ್ಗೀತೆ ಕುರಿತು ಒಂದು ನಿರ್ದಿಷ್ಟ ರಾಜಕೀಯ-ಸಾಂಸ್ಕೃತಿಕ (political-cultural) ಅಜೆಂಡಾ ಹೊಂದಿರುವ ಐಡಿಯಲಾಜಿಕಲ್ ಜನರೇ ಇದನ್ನು ಆಯೋಜನೆ ಮಾಡಿರುವುದು ಆತಂಕಕಾರಿಯಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಭಗವದ್ಗೀತೆ, ಮನುಸ್ಮೃತಿಯಂತಹ ಪಠ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವುದು ತಮಗೂ ತಿಳಿದಿರಬಹುದು. ಪ್ರಜಾಪ್ರಭುತ್ವ, ಸಂವಿಧಾನದ ಮೂಲ ತತ್ವಗಳ ನೆಲೆಯಲ್ಲಿ ಭಗವದ್ಗೀತೆ, ಮನುಸ್ಮೃತಿ, ವೇದ ಸಾಹಿತ್ಯ, ಪ್ರಾಚೀನ  ಜ್ಞಾನ ಪರಂಪರೆ ಇತ್ಯಾದಿಗಳನ್ನು ಚರ್ಚಿಸಬೇಕೇ ಅಥವಾ ಈಗಾಗಲೇ ದೇಶವನ್ನು ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಹೇಗೆ ಒಡೆಯಬೇಕು ಎಂದು ನೀಲನಕ್ಷೆ ಇಟ್ಟುಕೊಂಡು ಹೊರಟಿರುವ ಐಡಿಯಾಲಜಿಗಳ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆ? ಈ ಕುರಿತು ನಿಮ್ಮ ವಿವೇಚನೆ ಏನು ಪ್ರಶ್ನಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಓರ್ವ ಹೈಕೋರ್ಟ್ ವಕೀಲರು ಕುವೆಂಪು ವಿವಿಯಲ್ಲಿ ಸುಳ್ಳು ಜಾತಿಪ್ರಮಾಣ ಪತ್ರ ಪಡೆದುಕೊಂಡು  ರಾಜ್ಯಶಾಸ್ತ್ರ ವಿಭಾಗದಲ್ಲಿ ಮುಖ್ಯಸ್ಥರಾಗಿರುವ ಪ್ರೊ. ಷಣ್ಮುಖ ಎಂಬುವವರ ಪರವಾಗಿ ಹೈಕೋರ್ಟಿನಲ್ಲಿ ವಕಾಲತ್ತು ವಹಿಸುತ್ತಿದ್ದಾರೆ. ಪ್ರೊ. ಷಣ್ಮುಖ ಅವರು ವ್ಯಕ್ತಿಗತವಾಗಿಯೂ, ಬೌದ್ಧಿಕವಾಗಿಯೂ ಅತ್ಯಂತ ಅಪ್ರಮಾಣಿಕರಾಗಿದ್ದು ತಮ್ಮ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಗುಮಾನಿ ನಮ್ಮನ್ನು ಕಾಡುತ್ತಿದೆ.

ನಿಮ್ಮ ತಂದೆ  ಯು ಆರ್ ಅನಂತಮೂರ್ತಿಯವರು ನಿಧನರಾದಾಗ ಇದೇ ಗುಂಪು ಸೋಷಲ್ ಮೀಡಿಯಾದಲ್ಲಿ ʼನಿಲುಮೆʼ ಎಂಬ ಗುಂಪಿನೊಂದಿಗೆ ಸೇರಿಕೊಂಡು ಸಂಭ್ರಮಿಸುತ್ತಿದ್ದಾಗ ನಾವು ತೀವ್ರವಾಗಿ ವಿರೋಧಿಸಿದ್ದೆವು. ಪ್ರೊ. ಷಣ್ಮುಖ, ಪ್ರೊ ರಾಜಾರಾಮ ಹೆಗ್ಡೆ ಹಾಗೂ ಸಂಘ ಪರಿವಾರದ ವ್ಯಕ್ತಿಗಳೆಲ್ಲೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸೇರಿಕೊಂಡು ನಡೆಸುತ್ತಿದ್ದ ನಿಲುಮೆ ಗುಂಪಿನ ಅಕ್ಷರ ಪುಂಡುರೌಡಿಯೇ ರೋಹಿತ್ ಚಕ್ರತೀರ್ಥ ಎಂಬ ಆರೆಸ್ಸೆಸ್ ಕಾರ್ಯಕರ್ತ ಎನ್ನುವುದನ್ನು ಗಮನಿಸಿಬೇಕು ಎಂದು ಹೇಳಿದ್ದಾರೆ.

ಶರತ್‌ ಅನಂತಮೂರ್ತಿ ಸಮರ್ಥನೆ:

ಕುಗ್ವೆ ಅವರ ಪತ್ರಕ್ಕೆ ಪ್ರತಿಕ್ರಿಯಸಿರುವ ಶರತ್‌ ಅನಂತಮೂರ್ತಿ ಅವರು, ಪ್ರತಿಕ್ರಿಯಿಸಿ ನಿಮ್ಮಮಾತು ನಿಜವಾಗಿಯೂ ನನ್ನನ್ನು ಮರುಚಿಂತನೆಗೆ ಹಚ್ಚಿದೆ. ಆದರೆ ನೀವು ಕೆಲ issues ನ conflate ಮಾಡಿ ಹೇಳುತ್ತಿದ್ದೀರಿ! ಯಾರೋ ಒಬ್ಬ ಚಿಂತಕ ((I think it was Rousseau)) ಹೇಳಿದ ಹಾಗೆ, I am in complete disagreement with what you are saying, but I’ll defend to death, your right to say it”. ಮೇಲ್ನೋಟಕ್ಕೆ ಒಂದು ಧಾರ್ಮಿಕ ಗ್ರಂಥ ಕುರಿತು ಅಪರಾಧ ತಡೆಯಲ್ಲಿ ಅದರ ಪಾತ್ರ ಏನಿರಬಹುದು ಎಂಬ ಚರ್ಚೆಯಾಗಬೇಕೆಂಬ ( ಆಧುನಿಕ ಚೌಕಟ್ಟಿನ ನೆಲೆಯಲ್ಲಿ) ಚರ್ಚೆಯಲ್ಲಿ in principle ತಪ್ಪು ಕಾಣುವುದಿಲ್ಲ ಎಂದು ಹೇಳಿದ್ದಾರೆ.

 ಎಲ್ಲಿ problem ಆಗಬಹುದು ಎಂದರೆ ಧಾರ್ಮಿಕ ರೀತಿಯ ಪ್ರಚಾರವಾಗ ಬಾರದು. University ಯಲ್ಲಿ ಎಲ್ಲಾ ತರದ ಚರ್ಚೆಗಳಿಗೂ ಅವಕಾಶವಿರಬೇಕು ಆದರೆ critical approach ಅನ್ನು ಎಂದೂ ಕೈಬಿಡಕೂಡದು. ಇವರ ಈ framework ನ ಮೊದಲ ಟೀಕಾಕಾರನೇ ನಾನು! ! Please come to this function. Let the university continue to be a place for debate, dissension, disagreements but all done through mutual respect! ಈ ವಿಷಯದಲ್ಲಿ ಕುವೆಂಪುರವರ ಜೀವನದೃಷ್ಟಿ ತತ್ವಗಳಿಗೆ ನಿಜವಾದ ಅರ್ಥ ತರಲು ಸಾಧ್ಯ. ಕೇವಲ ಹುಸಿತನದಿಂದ ಕೂಡಿದ ಧೋರಣೆ ಗಳಿಂದಲ್ಲ. Anyway I deeply appreciate and thank you for this point of view you have expressed and would really like to discuss this further with you. Let us meet shortly ಎಂದು ಸಮರ್ಥಿಸಿಕೊಂಡಿದ್ದಾರೆ.

More articles

Latest article