ಬೆಂಗಳೂರು: ಬೆಂಗಳೂರಿನಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ರಾಜ್ಯದ ಎಲ್ಲಾ ಅಣೆಕಟ್ಟುಗಳಿಗೆ ಭದ್ರತೆ ನೀಡಲು ನಿರ್ಧರಿಸಲಾಗಿದೆ. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳು ಎಲ್ಲಾ ಅಣೆಕಟ್ಟುಗಳ ಇಂಜಿನಿಯರುಗಳಿಗೆ ಅವರು ಭದದ್ರತೆ ಕಲ್ಪಿಸಲು ಸೂಚನೆ ನೀಡಿದ್ದಾರೆ.
ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಣೆಕಟ್ಟುಗಳಿಗೆ ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆ (Karnataka State Police) ಯೊಂದಿಗೆ ಸಮನ್ವಯ ಮಾಡಿಕೊಂಡು ತಕ್ಷಣವೇ ಭದ್ರತಾ ಸಿಬ್ಬಂದಿಯನ್ನು ಸಾಕಷ್ಟು ಸಂಖ್ಯೆಯಲ್ಲಿ ನೇಮಕಮಾಡಿಕೊಳ್ಳುವುದರ ಜೊತೆಗೆ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವಂತೆ ತಮ್ಮನ್ನು ಕೋರಿದೆ. ಹಾಗೆಯೇ ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಚ್ಯುತಿಯಾದಲ್ಲಿ ಸಂಬಂಧಪಟ್ಟ ಯೋಜನಾಧಿಕಾರಿ/ಅಣೆಕಟ್ಟು ಅಧಿಕಾರಿಗಳೇ ಹೊಣೆಗಾರರುತ್ತೀರೆಂದು ತಮಗೆ ತಿಳಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಅಣೆಕಟ್ಟು ಭದ್ರತೆಗೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿ ನೇಮಕಗೊಂಡಿರುವ ಬಗ್ಗೆ ಮಾಹಿತಿಯನ್ನು ಪಡೆದು ಕ್ರೂಢೀಕರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಹಾಗೂ ಯೋಜನಾಧಿಕಾರಿಗಳಿಂದ ಸುವ್ಯವಸ್ಥೆಯ ಕುರಿತು ಹಾಗೂ ಯಾವುದೇ ಘಟನೆಗಳ ಕುರಿತು ಪ್ರತಿದಿನ ಮಾಹಿತಿಯನ್ನು ಪಡೆದು ಸರ್ಕಾರಕ್ಕೆ ಒದಗಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿದೆ.
ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಅಣುಸ್ಥಾವರ, ಅಣೆಕಟ್ಟುಗಳು ಸೇರಿದಂತೆ ಪ್ರಮುಖ ಸ್ಥಳಗಳ ರಕ್ಷಣೆಗೆ ಉತ್ತಮ ತರಬೇತಿ ಪಡೆದ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರೂ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಭದ್ರತೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಂತಹ ಕೆಲವು ವಿಶೇಷ ಪಡೆಗಳಿವೆ. ಅವುಗಳಿಗೆ ಕಮ್ಯಾಂಡೋ ತರಬೇತಿಗಳಾಗಿರುತ್ತವೆ. ಅಂತಹ ಸಿಬ್ಬಂದಿಗಳನ್ನು ಭದ್ರತಾ ಕೆಲಸಗಳಿಗೆ ನಿಯೋಜಿಸಲಾಗುವುದು ಎಂದರು.
ರಾಯಚೂರು (ಉಷ್ಣ ವಿದ್ಯುತ್ ಸ್ಥಾವರ), ಕೈಗಾ (ಪರಮಾಣು ವಿದ್ಯುತ್ ಸ್ಥಾವರ) ಮತ್ತು ಕೃಷ್ಣ ರಾಜ ಸಾಗರ ಅಣೆಕಟ್ಟು ಮುಂತಾದ ಪ್ರಮುಖ ಸ್ಥಳಗಳ ರಕ್ಷಣೆಗಾಗಿ ನಾವು ಕೈಗಾರಿಕಾ ಭದ್ರತಾ ಪಡೆಗಳನ್ನು ನಿಯೋಜಿಸುತ್ತೇವೆ. ಅವರೆಲ್ಲರೂ ಉತ್ತಮ ತರಬೇತಿ ಪಡೆದಿದ್ದಾರೆ ಮತ್ತು ಕಮಾಂಡೋ ತರಬೇತಿಯನ್ನು ಪಡೆದಿದ್ದಾರೆ ಎಂದು ಸಚಿವ ಪರಮೇಶ್ವರ ಹೇಳಿದರು.