ಅದಾನಿ ಬೇನಾಮಿ ಕಂಪನಿಗಳಲ್ಲಿ ಸೆಬಿ ಮುಖ್ಯಸ್ಥರ ಹೂಡಿಕೆ: ಹಿಂಡನ್‌ಬರ್ಗ್ ತನಿಖೆಯಿಂದ ಬಯಲು

Most read

ಅದಾನಿ ಸಮೂಹದ ಷೇರು ಅಕ್ರಮಕ್ಕೆ ಸಂಬಂಧಿಸಿದ ಸಾಗರೋತ್ತರ ಕಂಪನಿಗಳಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮುಖ್ಯಸ್ಥೆ ಮಾಧವಿ ಬುಚ್‌ ಹಾಗೂ ಅವರ ಪತಿ ಧವಲ್‌ ಬುಚ್‌ ಪಾಲು ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಅಮೆರಿಕದ ಹಿಂಡನ್‌ಬರ್ಗ್‌ ತನಿಖಾ ವರದಿಯಲ್ಲಿ ಬಹಿರಂಗಪಡಿಸಿದೆ.

ಶನಿವಾರ ರಾತ್ರಿ ಈ ಕುರಿತು 106 ಪುಟಗಳ ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್‌, ಅದಾನಿ ಗ್ರೂಪ್‌ ವಿರುದ್ಧದ ಷೇರು ಅವ್ಯವಹಾರ ಕುರಿತು ಸರಿಯಾಗಿ ತನಿಖೆಯಾಗದೇ ಇರಲು ಮುಖ್ಯ ಕಾರಣವನ್ನು ಬಹಿರಂಗಗೊಳಿಸಿದೆ. ಅದಾನಿಯ ಬೇನಾಮಿ ಕಂಪೆನಿಗಳಲ್ಲಿ ತಾವೇ ಷೇರುಗಳನ್ನು ಹೊಂದಿರುವ ಕಾರಣಕ್ಕೆ ಸೆಬಿ ಮುಖ್ಯಸ್ಥೆಯಾಗಿರುವ ಮಾಧವಿ ಬುಚ್‌ ಈ ತನಿಖೆಯನ್ನು ಸರಿಯಾಗಿ ಮಾಡಿಲ್ಲ ಎಂದು ದೂರಿದೆ.

ಹಿಂಡನ್‌ಬರ್ಗ್‌ ವರದಿಯ ಪ್ರಕಾರ, ಮಾಧವಿ ಬುಚ್‌ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್‌ನಲ್ಲಿರುವ ನಕಲಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಸಂಸ್ಥೆಗಳನ್ನು ಗೌತಮ್‌ ಅದಾನಿ ಅವರ ಸಹೋದರ ವಿನೋದ್‌ ಅದಾನಿ ಹಣಕಾಸು ಮಾರುಕಟ್ಟೆಯನ್ನು ತಿರುಚಲು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದೆ.

ಮಾಧವಿ ಬುಚ್ 2017ರಲ್ಲಿ ಸೆಬಿಯ ಪೂರ್ಣಾವಧಿ ಸದಸ್ಯರಾಗುವ ಮೊದಲೇ ಅಂದರೆ 2015ರಲ್ಲಿ ಅದಾನಿ ಬೇನಾಮಿ ಕಂಪನಿಗಳಲ್ಲಿ ಹೂಡಿಕೆಗಳನ್ನು ಮಾಡಿದ್ದಾರೆ. ನಂತರ ಮಾಧವಿ 2022ರ ಮಾರ್ಚ್‌ ನಲ್ಲಿ ಅವರು ಸೆಬಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುವ ವಾರದ ಮುಂಚೆಯೇ ಎಲ್ಲಾ ಹೂಡಿಕೆಗಳನ್ನು ಅವರ ಪತಿಯ ಹೆಸರಿಗೆ ವರ್ಗಾಯಿಸಿದ್ದಾರೆ. ಮಾಧವಿ ಸೆಬಿ ಅಧ್ಯಕ್ಷೆಯಾಗುವುದಕ್ಕೆ ಈ ಯಾವುದೇ ವ್ಯವಹಾರಗಳು ಅಡ್ಡಿಯಾಗದಿರಲಿ ಎಂದು ಈ ರೀತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

2015 ರಲ್ಲಿ ಸಿಂಗಾಪುರದಲ್ಲಿ ಮೊದಲ ಬಾರಿಗೆ ಐಪಿಇ ಪ್ಲಸ್‌ ಫಂಡ್‌ 1 ತೆರೆದಿದ್ದ ಮಾಧವಿ ಬುಚ್‌ ಹಾಗೂ ಧವಲ್‌ಬುಚ್‌ ಅವರು, ತಮ್ಮ ಬಂಡವಾಳ ಹೂಡಿಕೆಯ ಮೂಲ ವೇತನ ಎಂದು ಉಲ್ಲೇಖಿಸಿದ್ದರು. ಪ್ರಸ್ತುತ ದಂಪತಿಯ ನಿವ್ವಳ ಆದಾಯದ ಮೌಲ್ಯ 10 ಮಿಲಿಯನ್‌ ಡಾಲರ್‌ (83.94 ಕೋಟಿ ರೂ.)ನಷ್ಟಿದೆ ಎಂದು ವರದಿ ಹೇಳಿದೆ.

ಅದಾನಿ ಕಂಪನಿಯ ಅವ್ಯವಹಾರದಲ್ಲಿ ಬಂದ ಹಣವನ್ನು ಸೆಬಿ ಅಧ್ಯಕ್ಷೆ ಮಾಧವಿ ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹಿಂಡನ್‌ಬರ್ಗ್‌ ತನಿಖಾ ವರದಿಯಲ್ಲಿ ಆರೋಪಿಸಿದೆ. ಸೆಬಿ ಅಧ್ಯಕ್ಷರ ಜತೆ ಗೌತಮ್‌ ಅದಾನಿ ಹೊಂದಿರುವ ನಂಟಿನಿಂದ ಅದಾನಿ ಕಂಪನಿ ಬೃಹತ್‌ ಅವ್ಯವಹಾರವನ್ನು ಯಾವುದೇ ಭಯವಿಲ್ಲದೆ ಮುಂದುವರಿಸಿದೆ ಎಂದು ವರದಿಯಲ್ಲಿ ಆರೋಪ ಮಾಡಲಾಗಿದೆ.

ಹಿಂಡನ್‌ಬರ್ಗ್ 2023ರ ಜನವರಿಯಲ್ಲಿ ಬಿಲಿಯನೇರ್ ಗೌತಮ್ ಅದಾನಿಯ ಅದಾನಿ ಗ್ರೂಪ್‌ನ ಷೇರುಪೇಟೆ ವಂಚನೆಗಳ ಬಗ್ಗೆ ವರದಿಯನ್ನು ಬಹಿರಂಗಪಡಿಸಿತ್ತು. ಈ ವರದಿಯಿಂದಾಗಿ ಅದಾನಿ ಗ್ರೂಪ್‌ನ ಸಮೂಹ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು.

More articles

Latest article